ಪರಿಸರ ಸ್ನೇಹಿ 1200 ಹೊಸ ಬಸ್ ಸಂಚಾರ: ಸಾರಿಗೆ ಸಚಿವ ಲಕ್ಷ್ಮಣ್ ಸವದಿ

Update: 2020-03-20 14:38 GMT

ಬೆಂಗಳೂರು, ಮಾ.20: ರಾಜ್ಯದಲ್ಲಿ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಮುಂದಿನ ಎಪ್ರಿಲ್‌ನಿಂದ ಬಿಎಸ್-6 ಎಂಜಿನ್‌ಗಳನ್ನು ಒಳಗೊಂಡ 1,200 ಬಸ್‌ಗಳು ಕಾರ್ಯಾರಂಭ ಮಾಡಲಿವೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಪಿ.ಆರ್.ರಮೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಸುಮಾರು 3 ಸಾವಿರ ಬಿಎಸ್-6 ಬಸ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ, ಸಂಬಂಧಿಸಿದ ಕಂಪೆನಿ ನಿಗದಿತ ಅವಧಿಯಲ್ಲಿ ಅಷ್ಟೊಂದು ಬಸ್‌ಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹೀಗಾಗಿ 1200 ಬಸ್‌ಗಳನ್ನು ಪೂರೈಸಲು ಸೂಚಿಸಿದ್ದೇವೆಂದು ತಿಳಿಸಿದರು.

ಬೆಂಗಳೂರು ನಗರಕ್ಕೆ ಸುಮಾರು 400 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಖರೀದಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದೆ. ಹಾಗೂ ಖಾಸಗಿ ಎಲೆಕ್ಟ್ರಿಕಲ್ ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಸ್ಕಾಂ ಸಹಯೋಗದೊಂದಿಗೆ 100 ಕಡೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಹೊಗೆ ಉಗುಳುವ ಲಾರಿ, ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ವಾಹನಗಳ ನಾಮಫಲಕ ಹಾಕಿಕೊಳ್ಳುವುದರ ಬಗ್ಗೆ ಸೂಕ್ತ ಕಾನೂನು ಜಾರಿ ಮಾಡಲಾಗುವುದೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News