×
Ad

ಕೊರೋನ ಬಗ್ಗೆ ವಾಟ್ಸಪ್ ನಲ್ಲಿ ಸುಳ್ಳು ಸುದ್ದಿ: ಆರೋಪಿ ಬಂಧನ

Update: 2020-03-20 20:21 IST
ಸಾಂದರ್ಭಿಕ ಚಿತ್ರ

ತುಮಕೂರು,ಮಾ.20: ತುಮಕೂರು ನಗರದ ವ್ಯಕ್ತಿಯೊಬ್ಬರು ತಮ್ಮ ಪತ್ನಿಯೊಂದಿಗೆ ಇಂಡೋನೇಷ್ಯಾ ಪ್ರವಾಸ ಮುಗಿಸಿ ಭಾರತಕ್ಕೆ ಬಂದ ನಂತರ ಅವರಿಗೆ ಕೊರೋನ ಇದೆ ಎಂದು ಸುಳ್ಳುಸುದ್ದಿ ಹಬ್ಬಿಸಿದ್ದ ಆರೋಪಿಯನ್ನು ತುಮಕೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಚಿಕ್ಕಪೇಟೆಯ ಅರ್ಚಕ ಅಭಿಜಿತ್ ಎಂದು ತಿಳಿದು ಬಂದಿದ್ದು, ಆರೋಪಿಯು ಇಂಡೋನೇಷ್ಯಾದಿಂದ ಬಂದಿದ್ದ ಅಂಜನ್ ಹಾಗೂ ಅವರ ಪತ್ನಿಗೆ ಕೊರೋನ ವೈರಸ್ ಇರುವುದಾಗಿ ವಾಟ್ಸಪ್ ಗ್ರೂಪ್ ಗಳಲ್ಲಿ ಸುಳ್ಳುಸುದ್ದಿಯನ್ನು ಹಬ್ಬಿಸಿದ್ದ ಎನ್ನಲಾಗಿದೆ. ಅಂಜನ್ ಅವರು ಭಾರತಕ್ಕೆ ಹಿಂದಿರುಗಿದ ನಂತರ ಅಗ್ರಹಾರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಂದ ಪರೀಕ್ಷೆ ಮಾಡಿಸಿದ್ದು, ಆರೋಗ್ಯವಾಗಿರುವುದಾಗಿ ವೈದ್ಯರು ತಿಳಿಸಿದ್ದರು.

ಸುಳ್ಳು ಸುದ್ದಿ ಹಬ್ಬಿಸಿ ಮಾನಸಿಕ ಕಿರುಕುಳಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂಜನ್ ಅವರು ನೀಡಿದ ದೂರಿನ ಮೇರೆಗೆ ತುಮಕೂರು ನಗರ ಪೊಲೀಸ್‌ ಠಾಣೆಯ ಪಿಎಸ್ಐ ವಿಜಯಲಕ್ಷ್ಮಿ ಎಸ್. ಹಾಗೂ ಸಿಬ್ಬಂದಿಗಳ ತಂಡವು ಆರೋಪಿಯನ್ನು ಬಂಧಿಸಿದೆ.

ಸಾರ್ವಜನಿಕರಿಗೆ ಸೂಚನೆ

ವಿಶ್ವದಾದ್ಯಂತ ಮಾರಕ ಕೊರೋನಾ ವೈರಸ್‌‌ ಹರಡುತ್ತಿದ್ದು, ಈ ಸಂಬಂಧ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಮಾರಕ ವೈರಸ್ ಬಗ್ಗೆ ಯಾರದ್ದೋ ಹೆಸರು ಮತ್ತು ವಿಳಾಸವನ್ನು ನಮೂದಿಸಿ ಈ ಮಾರಕ ರೋಗ ಬಂದೇ ಬಿಟ್ಟಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇಂತಹ ಸುಳ್ಳು ಸುದ್ದಿಗಳನ್ನು ಶೇರ್‌ ಮಾಡುತ್ತಿರುವ ವಿಚಾರವು ಕಾನೂನು ರೀತಿಯ ಶಿಕ್ಷಾರ್ಹ ಅಪರಾಧವಾಗಿದ್ದು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಾರ್ವಜನಿಕರ  ನೆಮ್ಮದಿಗೆ ಭಂಗ ತರುವಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಇಂತಹ ಸುಳ್ಳು ಸುದ್ದಿ ಹಾಗೂ ವಂದತಿಗಳಿಂದ ಜನ ಸಾಮಾನ್ಯರೂ ಸಹ ಅತಂಕಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಸುಳ್ಳು ಸುದ್ದಿ ಹಾಗೂ ವಂದತಿಗಳಿಗೆ ಕಿವಿಗೊಡದೇ ಸರ್ಕಾರದ ಅಧಿಕೃತ ಮಾಹಿತಿ ಜಾಲತಾಣಗಳಲ್ಲಿ ಖಚಿತಪಡಿಸಿಕೊಳ್ಳಲು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಸಿಕೃಷ್ಣ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News