×
Ad

ಹುಬ್ಬಳ್ಳಿ, ಮಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪಿಸಲು ಪ್ರಧಾನಿ ಸಮ್ಮತಿ: ಸಿಎಂ ಬಿಎಸ್‌ವೈ

Update: 2020-03-20 21:44 IST

ಬೆಂಗಳೂರು, ಮಾ.20: ಮಾ.21ರಿಂದ 31ರವರೆಗೆ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇರುವ ಹೊಟೇಲ್‌ಗಳು ತಮ್ಮ ಪಾಕಶಾಲೆಯನ್ನು ಮಾತ್ರ ತೆರೆಯಬೇಕು. ಹಾಗೂ ಪಾರ್ಸೆಲ್ ಒದಗಿಸಲು ಕ್ರಮ ವಹಿಸಬೇಕು. ಎಲ್ಲ ಪಬ್‌ಗಳು, ಬಾರ್‌ಗಳನ್ನು ಕಡ್ಡಾಯವಾಗಿ ಮುಚ್ಚಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆ. 

ಕೋವಿಡ್ 19 ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ನಂತರ ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದರು. ಈ ಅವಧಿಯಲ್ಲಿ ಆಹಾರದ ಕೊರತೆಯಾಗದಂತೆ ವರ್ತಕರು ಎಚ್ಚರ ವಹಿಸುವಂತೆ ಹಾಗೂ ಈ ಸಂದರ್ಭದ ದುರುಪಯೋಗ ಪಡೆಯದಂತೆ ವರ್ತಕರಿಗೆ ಸೂಚಿಸಿದ್ದಾರೆ. ಕೋವಿಡ್ 19 ಸೋಂಕಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ 500 ವೆಂಟಿಲೇಟರ್‌ಗಳ ಖರೀದಿ ಹಾಗೂ 5000 ಆಕ್ಸಿಜನ್ ಸೌಲಭ್ಯ ಇರುವ ಹಾಸಿಗೆಗಳ ಸೌಲಭ್ಯ ಸೃಷ್ಟಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಫಲಪ್ರದವಾದ ಚರ್ಚೆಗಳು ನಡೆದಿದ್ದು, ಪ್ರಧಾನ ಮಂತ್ರಿಯವರು ಸಾಮಾಜಿಕ ಅಂತರ (social distancing) ಕಾಯ್ದುಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಹಾಗೂ ಕೊರೋನ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳನ್ನೂ ವಿವರಿಸಿದರು. ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಕ್ವಾರಂಟೈನಿಂಗ್ ಅನ್ನು ದೊಡ್ಡಮಟ್ಟದಲ್ಲಿ ಕೈಗೊಳ್ಳುವಂತೆ ಸಲಹೆ ನೀಡಿದರು.

ಕಲಬುರಗಿ ಹಾಗೂ ಬಳ್ಳಾರಿಗಳಲ್ಲಿ ರೀಜೆಂಟ್‌ಗಳ ಅಗತ್ಯವಿದ್ದು, ಹುಬ್ಬಳ್ಳಿ, ಮಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪಿಸುವಂತೆ ಪ್ರಧಾನ ಮಂತ್ರಿಯವರಿಗೆ ಮನವಿ ಮಾಡಿದ್ದು, ಅವರು ಅದಕ್ಕೆ ಸಮ್ಮತಿಸಿದರು. ಇತರ ರಾಜ್ಯಗಳ ಮುಖ್ಯಮಂತ್ರಿಗಳು ನೀಡಿದ ಸಲಹೆ ಮತ್ತು ಬೇಡಿಕೆಗಳನ್ನು ಪರಿಗಣಿಸುವುದಾಗಿಯೂ ಭರವಸೆ ನೀಡಿದರು. ಎಲ್ಲ ಮುಖ್ಯಮಂತ್ರಿಗಳು ಆಹಾರ ಮತ್ತು ಔಷಧಿಗಳ ಕೊರತೆ ಉಂಟಾಗದಂತೆ ವರ್ತಕರು ಹಾಗೂ ಔಷಧ ಮಾರಾಟಗಾರರೊಂದಿಗೆ ನಿಕಟ ಸಂಪರ್ಕ ಇರಿಸಿಕೊಳ್ಳುವಂತೆ ಸೂಚಿಸಿದರು. ಕೊರೋನ ಕುರಿತ ಮಾರ್ಗಸೂಚಿಗಳನ್ನು ಜನತೆ ಪಾಲಿಸುವಂತೆ ಮುಖ್ಯಮಂತ್ರಿಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಹಾಗೂ ಅಗತ್ಯವಿದ್ದಲ್ಲಿ ಒತ್ತಡ ಹೇರುವಂತೆಯೂ ಸೂಚಿಸಿದರು.

ಪ್ರಧಾನ ಮಂತ್ರಿಗಳ ನೀಡಿದ ಸಲಹೆಗಳು  

ಪ್ರಯೋಗಾಲಯ ಮತ್ತು ಇತರ ಮೂಲಸೌಕರ್ಯ ಗಳನ್ನು ಒದಗಿಸುವುದು. ಕ್ವಾರಂಟೈನ್ ಅವಧಿಯಲ್ಲಿ ಅಗತ್ಯ ಆಹಾರ ಧಾನ್ಯಗಳನ್ನು ಒದಗಿಸುವುದು. ಅಸಂಘಟಿತ ವಲಯಗಳ ಕಾರ್ಮಿಕರಿಗೆ ಉದ್ಯೋಗ ಅಥವಾ ನಿರುದ್ಯೋಗ ಭತ್ಯೆ ನೀಡುವುದು. ಅಂತರ್‌ರಾಷ್ಟ್ರೀಯ ಪ್ರಯಾಣ ನಿಷೇಧ ಮಾಡುವುದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಆಹಾರ ಮತ್ತು ಔಷಧ ಉತ್ಪಾದಕರ ಜೊತೆ ಸಂಪರ್ಕ ಏರ್ಪಡಿಸಿ ಸಹಕಾರ ಪಡೆಯುವುದು. ನಿವಾರಣಾ ಕ್ರಮಗಳಿಗೆ ಅಗತ್ಯ ಆರ್ಥಿಕ ನೆರವು ನೀಡಲು ಕೇಂದ್ರ ಸಿದ್ಧವಿದ್ದು, ಲಿಖಿತವಾಗಿ ಪ್ರಸ್ತಾವನೆಯನ್ನು ಸಲ್ಲಿಸುವುದು. ಕೇಂದ್ರದ ಅಧಿಕಾರಿಗಳು ಪ್ರಸ್ತಾವನೆಗಳ ಟಿಪ್ಪಣಿ ಮಾಡಿಕೊಂಡಿದ್ದು, ಶೀಘ್ರವಾಗಿ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಹೇಳಿದ್ದಾರೆ.  

ರಾಜ್ಯಪಾಲರಿಂದ ಸಾರ್ವಜನಿಕರಲ್ಲಿ ಮನವಿ

‘ಮಾ.22ರ ಬೆಳಗ್ಗೆ 7 ರಿಂದ ಸಂಜೆ 9ರವರೆಗೆ ಜನತಾ ಕರ್ಫ್ಯೂವನ್ನು ಆಚರಿಸಲು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಅಂದು ಸಂಜೆ 5ಗಂಟೆಗೆ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಮಾಧ್ಯಮದವರು, ಸ್ವಚ್ಛತೆಯನ್ನು ನಿರ್ವಹಿಸುವ ಸಿಬ್ಬಂದಿಗಳು ಸಲ್ಲಿಸುತ್ತಿರುವ ಸೇವೆಗಾಗಿ ಚಪ್ಪಾಳೆ ತಟ್ಟುವ ಅಥವಾ ಗಂಟೆ ಬಾರಿಸುವ ಮೂಲಕ ಧನ್ಯವಾದ ಸಲ್ಲಿಸೋಣ. ಅಗತ್ಯ ಸಾಮಗ್ರಿಗಳ ಅತಿ ಸಂಗ್ರಹ ಮಾಡುವುದನ್ನು ಬಿಡೋಣ. 60-65 ವರ್ಷದ ಹಿರಿಯ ನಾಗರಿಕರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಇರುವುದು ಒಳ್ಳೆಯದು. ವ್ಯಾಪಾರಿಗಳು ಮತ್ತು ಶ್ರೀಮಂತರು ಅವರ ಸಿಬ್ಬಂದಿಗಳ ಪಾಲನೆ ಮಾಡುವುದು ಹಾಗೂ ಅವರ ಗೈರು ಹಾಜರಿಗೆ ದಂಡಿಸಬಾರದು. ಸಾಮಾನ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವುದನ್ನು ಬಿಡಬೇಕು. ಕೋವಿಡ್ 19 ನಿಂದ ಆಗುವ ಆರ್ಥಿಕ ಪರಿಸ್ಥಿತಿಯನ್ನು ನಿಬಾಯಿಸಲು ಕೋವಿಡ್ 19 ಟಾಸ್ಕ್ ಫೋರ್ಸ್‌ನ್ನು ರಚಿಸಲಾಗುವುದು.

-ವಿ.ಆರ್.ವಾಲಾ, ರಾಜ್ಯಪಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News