ಕೊಡಗು: ಜಿಲ್ಲಾಸ್ಪತ್ರೆಯಲ್ಲಿ ಐವರಿಗೆ ಚಿಕಿತ್ಸೆ; 232 ಮಂದಿಯ ಮೇಲೆ ಹೆಚ್ಚಿನ ನಿಗಾ

Update: 2020-03-20 16:41 GMT

ಮಡಿಕೇರಿ, ಮಾ.20: ಕೋವಿಡ್-19ರ ಸಂಬಂಧ ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಪತ್ತೆ ಹಚ್ಟಿ ತಪಾಸಣೆ ಮಾಡುವ ಕಾರ್ಯವನ್ನು ಮುಂದುವರೆಸಲಾಗಿದೆ. ಅದರಂತೆ ಶುಕ್ರವಾರ ಸಂಜೆಯವರೆಗೆ ಮಡಿಕೇರಿ ತಾಲೂಕಿನಲ್ಲಿ 92 ವಿರಾಜಪೇಟೆ ತಾಲೂಕಿನಲ್ಲಿ 76 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 74 ಜನರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 232 ಜನರನ್ನು (ನೆಗೆಟಿವ್ ವರದಿ ಕಾರಣ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಗೊಂಡ ಒಂದು ಪ್ರಕರಣ ಸೇರಿದಂತೆ) ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು ಮಾಡಲಾಗಿದೆ. ಅಲ್ಲದೆ 5 ಜನ ಪ್ರವಾಸಿಗರನ್ನು ರೆಸಾರ್ಟ್/ ಹೋಂ ಸ್ಟೇಗಳಲ್ಲಿ ಸಂಪರ್ಕ ತಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. 

ಒಟ್ಟು 5 ವ್ಯಕ್ತಿಗಳಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸಲಾಗುತ್ತಿದೆ. ಈ ಪ್ರಕರಣಗಳ ಪೈಕಿ 1 ಪ್ರಕರಣದಲ್ಲಿ (ವಿರಾಜಪೇಟೆ ತಾಲೂಕಿನ 35 ವರ್ಷ ಪ್ರಾಯದ ಪುರುಷರೊಬ್ಬರಿಗೆ) ಪ್ರಯೋಗಾಲಯ ವರದಿಯಿಂದ ಸೋಂಕು ಇರುವುದು ದೃಢಪಟ್ಟಿರುತ್ತದೆ. ಉಳಿದ 4 ಪ್ರಕರಣಗಳಲ್ಲಿ ಪ್ರಯೋಗಾಲಯ ವರದಿ ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಮೊದಲ ಬಾರಿಗೆ 1 ಪ್ರಕರಣದಲ್ಲಿ ಸೋಂಕು ದೃಢಪಟ್ಟ ಕಾರಣ ಕೋವಿಡ್-19 ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಕಚೇರಿಗಳಲ್ಲಿ ಅನಿವಾರ್ಯ/ ತುರ್ತು ಸಂದರ್ಭವನ್ನು ಹೊರತುಪಡಿಸಿ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ.  

ಕೊರೋನ ವೈರಸ್ ಹರಡದಂತೆ ಜಿಲ್ಲಾಡಳಿತದಿಂದ ಮಾರ್ಚ್ 14 ರಂದು ಹೊರಡಿಸಿದ್ದ ಆದೇಶವನ್ನು ಮುಂದುವರೆಸಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ಎಲ್ಲಾ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರ/ಸಾರ್ವಜನಿಕರ ಭೇಟಿಯನ್ನು ಮಾರ್ಚ್ 31 ರವರೆಗೆ ನಿಷೇಧಿಸಿ ಆದೇಶಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News