ಕೊರೋನ ಭೀತಿ: ಪ್ರಾರ್ಥನೆಯನ್ನು ಮನೆಯಲ್ಲೇ ಮಾಡಲು ಕೊಡಗು ಜಿಲ್ಲಾಡಳಿತ ಮನವಿ

Update: 2020-03-20 16:52 GMT

ಮಡಿಕೇರಿ, ಮಾ.20: ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆ ಮದುವೆ ಮತ್ತಿತರ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಬೇಕು. ಜತೆಗೆ ಪ್ರಾರ್ಥನೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳುವಂತಾಗಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಧಾರ್ಮಿಕ ಮುಖಂಡರ ಜೊತೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಮನವಿ ಮಾಡಿದರು. ಈಗಾಗಲೇ ಜಿಲ್ಲೆಯಲ್ಲಿನ ಒಬ್ಬರಿಗೆ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ಮತ್ತಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ. ಆದ್ದರಿಂದ ಸಮಾಜದ ಮುಖಂಡರ ಸಹಕಾರ ಅತ್ಯಗತ್ಯ. ಆ ನಿಟ್ಟಿನಲ್ಲಿ ತಮ್ಮ ತಮ್ಮ ಗ್ರಾಮಸ್ಥರಿಗೆ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.  

ಕೊರೋನ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೈರಸ್ ಆಗಿರುವುದರಿಂದ, ಹೆಚ್ಚಿನ ನಿಗಾ ವಹಿಸಬೇಕಿದೆ. ಆ ನಿಟ್ಟಿನಲ್ಲಿ ವಿದೇಶಗಳಿಂದ ಬಂದಿರುವವರ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ಕೊರೋನ ವೈರಸ್ ಲಕ್ಷಣ ಇಲ್ಲದಿದ್ದರೂ ಸಹ ವಿದೇಶದಿಂದ ಬಂದವರೂ 14 ದಿನಗಳ ಮಟ್ಟಿಗೆ ಮನೆಯಲ್ಲಿಯೇ ಉಪಚರಿಸಬೇಕು. ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು. ಕೆಮ್ಮು, ನೆಗಡಿ, ಜ್ವರ ಬಂದಲ್ಲಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ದಾಖಲಾಗಬೇಕು. ಆ ನಿಟ್ಟಿನಲ್ಲಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.  

ಸಿಆರ್‍ಪಿಸಿ 144(3)ರ ಅಡಿಯಲ್ಲಿ ಈಗಾಗಲೆ ಹಲವು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಕೊಂಡಂಗೇರಿಯನ್ನು ಕಂಟೈನ್‍ಮೆಂಟ್ ವಲಯ ಎಂದು ಪರಿಗಣಿಸಿ ಆ ಪ್ರದೇಶದಲ್ಲಿ ಎಲ್ಲಾ ರೀತಿಯ ಸಭೆ, ಸಮಾರಂಭಗಳನ್ನು ನಿಷೇಧಿಸಲು ಆದೇಶಿಸಲಾಗಿದೆ. ಈ ನಿಟ್ಟಿನಲ್ಲಿ ದಾರ್ಮಿಕ ಮುಖಂಡರುಗಳೂ ಸಹ ತಮ್ಮ ಸಮುದಾಯದವರಿಗೆ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಮಾಹಿತಿ ನೀಡಬೇಕು ಎಂದು ಕೋರಿದರು.    

ಧಾರ್ಮಿಕ ಮುಖಂಡರಾದ ಅಬ್ದುಲ್ಲ ಫೈಝಿ, ಮದುವೆ ಮತ್ತಿತರ ಜನ ಸೇರುವ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಆದರೆ ಶುಕ್ರವಾರ ಮಾತ್ರ ದೊಡ್ಡ ದೊಡ್ಡ ಮಸೀದಿಗಳಲ್ಲಿ ಕನಿಷ್ಠ 40 ಮಂದಿ ಪ್ರಾರ್ಥನೆಗೆ ಸೇರುತ್ತಾರೆ ಎಂದು ಅವರು ಹೇಳಿದರು. ಪ್ರಾರ್ಥನಾ ಸಮಯದಲ್ಲಿ ಮಕ್ಕಳು, ಹಿರಿಯರು ಮಸೀದಿಗೆ ಬರುವುದಿಲ್ಲ, 15 ನಿಮಿಷದಲ್ಲಿ ಪ್ರಾಥನೆ ಮುಕ್ತಾಯವಾಗಲಿದೆ ಎಂದು ಮತ್ತೊಬ್ಬ ಮುಖಂಡರು ಹೇಳಿದರು. 

ಪ್ರಮುಖರಾದ ಕೆ.ಎ.ಯಾಕುಬ್ ಮಾತನಾಡಿ, ಈಗಾಗಲೇ ಎಲ್ಲಾ ಜಮಾಅತ್‍ಗಳಿಗೆ ಪತ್ರ ಬರೆಯಲಾಗಿದ್ದು, ವಿದೇಶದಿಂದ ಬಂದಿರುವವರನ್ನು ಹೆಚ್ಚಿನ ನಿಗಾ ವಹಿಸಲು ತಿಳಿಸಲಾಗಿದೆ. ಕೊರೋನ ಲಕ್ಷಣ ಇಲ್ಲದಿದ್ದರೂ 14 ದಿನಗಳ ಕಾಲ ಮನೆಯಲ್ಲಿಯೇ ಉಪಚರಿಸಬೇಕು ಎಂದು ಮಾಹಿತಿ ನೀಡಲಾಗಿದೆ ಎಂದರು. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಸಂಬಂಧ ಸ್ಥಳಿಯರೊಂದಿಗೆ ಚರ್ಚಿಸಿ ಎರಡು-ಮೂರು ದಿನದಲ್ಲಿ ಮಾಹಿತಿ ನೀಡಲಾಗುವುದು ಎಂದು ಸಭೆಯಲ್ಲಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಮಾತನಾಡಿ, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋಗಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಜೊತೆ ಎಲ್ಲರೂ ಸಹಕರಿಸಬೇಕಿದೆ ಎಂದು ಅವರು ಮನವಿ ಮಾಡಿದರು. ವಿದೇಶಗಳಿಂದ ಮರಳಿ ಮನೆಗೆ ಬಂದವರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಆದೇಶಿಸಲಾಗಿದ್ದು, ಇದನ್ನು ತಪ್ಪಿಸಿ ಮನೆಯಿಂದ ಹೊರಬಂದಲ್ಲಿ ಅಂತಹವರ ಚಲನ-ವಲನಗಳ ಬಗ್ಗೆ ಜಿಲ್ಲಾಡಳಿತ, ಪೊಲೀಸರ ಗಮನಕ್ಕೆ ತರುವಂತೆ ಧಾರ್ಮಿಕ ಮುಖಂಡರುಗಳಿಗೆ ತಿಳಿಸಿದರು.  

ಕೊಂಡಂಗೇರಿಯಲ್ಲಿ 500 ಮೀಟರ್ ವ್ಯಾಪ್ತಿಯನ್ನು ಕಂಟೈನರ್ ವಲಯವೆಂದು ನಿರ್ಬಂಧಿಸಲಾಗಿದೆ. ಈ ಪ್ರದೇಶಕ್ಕೆ ಜಿಲ್ಲಾಡಳಿತ ವತಿಯಿಂದ ಆಹಾರ ಪೂರೈಸಲಾಗುವುದು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಅವಕಾಶ ಮಾಡಲಾಗುವುದು. ಕೊಂಡಗೇರಿ ಪ್ರದೇಶದಲ್ಲಿ ಆಶಾ, ಎಎನ್‍ಎಂ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಸಮಸ್ಯೆಗಳು ಇದ್ದಲ್ಲಿ, ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ಕೋರಿದರು. 

ಈಗಾಗಲೇ ಜಿಲ್ಲೆಯಲ್ಲಿ ಮನೆ ಸಂಪರ್ಕ ತಡೆಯಲ್ಲಿರುವವರ ಸಂಖ್ಯೆ 218ಕ್ಕೆ ತಲುಪಿದೆ. ಆದ್ದರಿಂದ ಮನೆಯಲ್ಲಿ ಪ್ರತ್ಯೇಕವಾಗಿರುವವರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದರು.   

ಸಭೆಯಲ್ಲಿ ಧಾರ್ಮಿಕ ಮುಖಂಡರಾದ ಮಹಮದ್ ಮುಸ್ಲಿಮಿಯಾರ್, ಪ್ರಮುಖರಾದ ಲತೀಫ್, ಉಪ ವಿಭಾಗಾಧಿಕಾರಿಗಳಾದ ಟಿ.ಜವರೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಮೋಹನ್, ಕೊಡಗು ವೈದ್ಯಕೀಯ ಕಾಲೇಜಿನ ಡೀನ್ ಡಾ, ಕಾರ್ಯಪ್ಪ, ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್, ವಿರಾಜಪೇಟೆ ತಹಶೀಲ್ದಾರ್ ನಂದೀಶ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೆಶಕ ಗೌರವ್ ಕುಮಾರ್ ಶೆಟ್ಟಿ, ಡಿವೈಎಸ್ಪಿ ದಿನೇಶ್ ಕುಮಾರ್, ಅನನ್ಯ ಕುಮಾರ್ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News