ಕೊರೋನ ಭೀತಿ: ಕೊಡಗಿನ ಈ ಎರಡು ಗ್ರಾಮಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಿದ ಜಿಲ್ಲಾಡಳಿತ

Update: 2020-03-20 18:16 GMT

ಮಡಿಕೇರಿ, ಮಾ.20: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೇತುಮೊಟ್ಟೆ ಗ್ರಾಮದ 75 ಮನೆಗಳ 304 ಮಂದಿ ಅಲ್ಲದೆ, ಕೊಂಡಂಗೇರಿ ಗ್ರಾಮದ 247 ಮನೆಗಳ 1,054 ಮಂದಿ ವಾಸಿಸುತ್ತಿರುವ ಎರಡೂ ಗ್ರಾಮಗಳಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ. 

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕಣ್ಣಂಗಾಲದ ಹಾಲುಗುಂದ ಉಪ ಕೇಂದ್ರ ವ್ಯಾಪ್ತಿಯ ಕೇತುಮೊಟ್ಟೆ ಗ್ರಾಮಕ್ಕೆ ಬಂದಿರುವ ವ್ಯಕ್ತಿಯೋರ್ವರಿಗೆ ಕೊರೋನ ವೈರಸ್ ಸೋಂಕು ತಗುಲಿರುವ ಹಿನ್ನೆಲೆ ಮುಂದಿನ ಆದೇಶದವರೆಗೆ, ಕೇತುಮೊಟ್ಟೆ ಗ್ರಾಮದಲ್ಲಿರುವ ಒಟ್ಟು 75 ಮನೆಗಳಲ್ಲಿ 304 ಮಂದಿ ವಾಸಿಸುತ್ತಿರುವ 500 ಮೀಟರ್ ವ್ಯಾಪ್ತಿಯ ಭೌಗೋಳಿಕ ಪ್ರದೇಶವನ್ನು ಕಂಟೈನ್‌ಮೆಂಟ್ ಏರಿಯಾ ಎಂದು ಘೋಷಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಕೊಂಡಂಗೇರಿ ಗ್ರಾಮದಲ್ಲಿ 247 ಮನೆಗಳಲ್ಲಿ ಒಟ್ಟು ಜನಸಂಖ್ಯೆ 1054 ಮಂದಿ ವಾಸಿಸುತ್ತಿರುವ ಭೌಗೋಳಿಕ ಪ್ರದೇಶವನ್ನು ಬಫರ್ ಜೋನ್ ಎಂದು ಜಿಲ್ಲಾಡಳಿತ ಘೋಷಿಸಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಹೊರ ಪ್ರದೇಶಕ್ಕೆ ಹೋಗುವಂತಿಲ್ಲ ಮತ್ತು ಹೊರಗಿನವರು ಈ ಪ್ರದೇಶಕ್ಕೆ ಆಗಮಿಸುವಂತಿಲ್ಲ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಕ್ರೀಡೆ, ಸಭೆ, ಸಮಾರಂಭ, ಮದುವೆ ಮುಂತಾದ ಜನ ಗುಂಪು ಸೇರುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. 

ಈ ನಿಷೇಧಿತ ಪ್ರದೇಶದ ಎಲ್ಲಾ ಕಚೇರಿಗಳು, ಅಂಗಡಿ ಮಳಿಗೆ, ದಾಸ್ತಾನು ಕೇಂದ್ರ, ಎಲ್ಲಾ ಅವಶ್ಯ ಮತ್ತು ತುರ್ತು ಸೇವೆಗಳನ್ನು ನೀಡುವ ಮಳಿಗೆಗಳನ್ನು ಮುಚ್ಚಬೇಕು. ಯಾವುದೇ ಅಗತ್ಯ ವಸ್ತುಗಳ ಪೂರೈಕೆಯನ್ನು ಸಂಬಂಧಪಟ್ಟ ಇಲಾಖೆಗಳ ಮೂಲಕ ಪಡೆಯಬೇಕು. ಇದನ್ನು ಹೊರತುಪಡಿಸಿ ಯಾವುದೇ ಖಾಸಗಿ ಮೂಲಗಳಿಂದ ಪಡೆಯುವಂತಿಲ್ಲ. ಈ ಪ್ರದೇಶದಲ್ಲಿರುವ ಎಲ್ಲಾ ಮನೆಗಳಲ್ಲಿನ ಸದಸ್ಯರು ಅವರ ಮನೆ ಬಿಟ್ಟು ಹೊರಗಡೆ ತಿರುಗಾಡುವಂತಿಲ್ಲ ಮತ್ತು ಇತರರ ಮನೆಗಳಿಗೆ ಹೋಗುವಂತಿಲ್ಲ. ಎಲ್ಲಾ ಮನೆಗಳ ಸದಸ್ಯರು ಗೃಹ ಸಂಪರ್ಕ ತಡೆ(ಹೋಂ ಕ್ವೆರೆಂಟೈನ್) ಯಲ್ಲಿರಬೇಕು. ಇಲ್ಲಿ ವಾಸಿಸುತ್ತಿರುವವರ ಆರೋಗ್ಯದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರತಿನಿತ್ಯ ಪರಿಶೀಲನೆ ನಡೆಸುವುದುರ ಜೊತೆಗೆ ತೀವ್ರ ನಿಗಾವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಈ ಆದೇಶದ ಉಲ್ಲಂಘನೆಯು ಭಾರತೀಯ ದಂಡ ಸಂಹಿತೆ 1860ರ ಕಲಂ 188 ರೀತಿಯ ದಂಡನೀಯವಾಗಿದ್ದು, ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News