ಶ್ರೀಗಂಧ ಕಳ್ಳತನ ಪ್ರಕರಣ: ಏಳು ಮಂದಿಯ ಬಂಧನ

Update: 2020-03-21 13:11 GMT

ಮಡಿಕೇರಿ, ಮಾ.21: ಜಿಲ್ಲೆಯ ವೀರಾಜಪೇಟೆ ವ್ಯಾಪ್ತಿಯಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ತಂಡವನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಏಳು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೊಂಡಂಗೇರಿ ಹಾಲುಗುಂದ ಗ್ರಾಮದ ಅಬ್ದುಲ್ ಜಾಫರ್, ಎಲಿಯಂಗಾಡ್‍ನ ಎಂ.ಎಂ.ಅಬ್ದುಲ್ಲಾ, ಪೊನ್ನಂಪೇಟೆ ಮತ್ತೂರಿನ ವಿ.ಬಿ.ಮನ್ಮಥ, ಬಾಳಾಜಿ ಗ್ರಾಮದ ಸಿ.ಎಸ್. ಭೀಮಯ್ಯ, ಹೊದ್ದೂರು ವಾಟೆಕಾಡುವಿನ ಎ.ಎಂ. ಎರ್ಮು, ಮಡಿಕೇರಿ ನ್ಯೂ ಎಕ್ಸ್ ಟೆನ್ಷನ್‍ನ ಪಿ.ಕೆ.ಪ್ರೀತು ಹಾಗೂ ಮೈಸೂರು ಕೆಸರೆ ನಾಯ್ಡುನಗರದ ಸೈಯ್ಯದ್ ಗೌಸ್ ಮೊಹಿದ್ದೀನ್ ಎಂದು ಗುರುತಿಸಲಾಗಿದೆ.

ಪ್ರಕರಣವೊಂದನ್ನು ಪತ್ತೆಹಚ್ಚಲು ಅಪರಾಧ ಪತ್ತದಳದ ಸಿಬ್ಬಂದಿಗಳು ಮಾಹಿತಿ ಕಲೆಹಾಕುತ್ತಿದ್ದಾಗ ಕೊಡಗು ಹಾಗೂ ನೆರೆಯ ಹಾಸನ ಜಿಲ್ಲೆಯ ವ್ಯಾಪ್ತಿಯಿಂದಲೂ ಗೌಪ್ಯವಾಗಿ ಶ್ರೀಗಂಧದ ಮರಗಳನ್ನು ಕತ್ತರಿಸಿ, ಸಂಗ್ರಹಿಸಿ ಕೊಂಡಂಗೇರಿ ಹಾಗೂ ಮಡಿಕೇರಿಯ ಮಧ್ಯವರ್ತಿ ಚೋರರು ಇದನ್ನು ಮೈಸೂರು ಮೂಲದ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದರೆಂಬ ಅಂಶ ಬಯಲಾಗಿದೆ.

ಬಂಧಿತ ಆರೋಪಿಗಳು ವೀರಾಜಪೇಟೆಯ ಕೊಟ್ಟೋಳಿ ಹಾಗೂ ಚೆಂಬೆಬೆಳ್ಳೂರು ಗ್ರಾಮದಿಂದ ಎರಡು ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಮತ್ತು ಹಾಸನ ಜಿಲ್ಲೆಯ ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯ ಸಂದರ್ಭ ದೃಢಪಟ್ಟಿದೆ. ಆರೋಪಿಗಳಿಂದ 50 ಸಾವಿರ ಮೌಲ್ಯದ 6 ಕೆ.ಜಿ ಗಂಧದ ತುಂಡುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನ, ಇತರ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಅವರ ಮಾರ್ಗದರ್ಶನದಲ್ಲಿ ಡಿಸಿಬಿಐ ಪ್ರಭಾರ ಇನ್ಸ್ ಪೆಕ್ಟರ್ ಹೆಚ್.ವಿ.ಚಂದ್ರಶೇಖರ್, ಸಿಬ್ಬಂದಿಗಳಾದ ಕೆ.ವೈ ಹಮೀದ್, ಕೆ.ಎಸ್.ಅನಿಲ್‍ ಕುಮಾರ್, ವಿ.ಜಿ.ವೆಂಕಟೇಶ್, ಬಿ.ಎಲ್.ಯೋಗೇಶ್‍ ಕುಮಾರ್, ಕೆ.ಆರ್.ವಸಂತ, ಎಂ.ಎನ್.ನಿರಂಜನ್, ಬಿಜೆಪಿ ಶರತ್ ರೈ, ಯು.ಎ.ಮಹೇಶ್ ಹಾಗೂ ಚಾಲಕ ಕೆ.ಎಸ್.ಶಶಿಕುಮಾರ್, ಸಿಡಿಆರ್ ಸೆಲ್‍ನ ರಾಜೇಶ್ ಹಾಗೂ ಗಿರೀಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News