ಹೆದರಿಸುವ ಹೇಳಿಕೆ ಏಕೆ ನೀಡಿದ್ದೀರಿ: ಭಾಸ್ಕರ್ ರಾವ್ ರನ್ನು ತರಾಟೆಗೆ ತೆಗೆದ ಗೃಹ ಸಚಿವ ಬೊಮ್ಮಾಯಿ

Update: 2020-03-21 14:35 GMT

ಬೆಂಗಳೂರು, ಮಾ.21: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಉಲ್ಲಂಘಿಸಿ, ಮನೆಯಿಂದ ಹೊರಗಡೆ ಬಂದರೆ ಕೇಸ್ ಹಾಕುತ್ತೇವೆ ಎಂಬ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿಕೆ ವಿಚಾರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿವರಣೆ ಕೇಳಿದ್ದಾರೆಂದು ವರದಿಯಾಗಿದೆ.

ಶನಿವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಕರಣ ದಾಖಲಿಸಲು ಅವಕಾಶ ಇದಿಯಾ, ಏಕೆ ಆ ರೀತಿ ಹೆದರಿಸುವ ಹೇಳಿಕೆ ನೀಡಿದ್ದೀರಿ, ಜನರು ಸ್ವಯಂ ಪ್ರೇರಿತವಾಗಿ ಮನೆಯಲ್ಲಿರುವುದೇ ಜನತಾ ಕರ್ಫ್ಯೂ. ಹೀಗೆ ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ರಾಜ್ಯಗಳ ಗಡಿಗಳನ್ನು ಬಂದ್ ಮಾಡುವುದಿಲ್ಲ. ಈ ಬಗ್ಗೆ ಮೂರು ದಿನಗಳ ಬಳಿಕ ಯೋಚಿಸುತ್ತೇವೆ. ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಕೇರಳ, ಆಂಧ್ರ, ತೆಲಂಗಾಣ, ಮಹರಾಷ್ಟ್ರ ಗಡಿ ಭಾಗಗಳಲ್ಲಿ ನಿಗಾ ಮತ್ತು ಸ್ಕ್ರೀನಿಂಗ್ ಮಾಡಲು ಸೂಚಿಸಲಾಗಿದೆ ಎಂದರು.

ಮುಂದಿನ ಎರಡು ವಾರ ಜಾಗ್ರತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಾವು ಸಿದ್ಧರಾಗಿರಬೇಕು ಎಂದ ಅವರು, ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಪೊಲೀಸರಿಗೆ ಸ್ಯಾನಿಟೈಸರ್, ಮಾಸ್ಕ್ ಅಗತ್ಯವಿದೆ. ಬೆಂಗಳೂರು ಕರಗ ಆಚರಣೆ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಿ ವಾಸ್ತವ ವಿಚಾರ ತಿಳಿಸುತ್ತೇವೆ ಎಂದು ಹೇಳಿದರು.

‘ಬಲವಂತದಿಂದ ಜನತಾ ಕರ್ಫ್ಯೂ ಇಲ್ಲ’

ಯಾವುದೇ ಬಲವಂತದಿಂದ ಜನತಾ ಕರ್ಫ್ಯೂ ಇಲ್ಲ. ಅಷ್ಟೇ ಅಲ್ಲದೆ, ಯಾವುದೇ ಪ್ರಕರಣ ಹಾಕುವುದಿಲ್ಲ. ಸ್ವಯಂ ಪ್ರೇರಣೆಯಿಂದ ಮಾಡಲು ಮನವಿ ಮಾಡುತ್ತೇವೆ.

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News