×
Ad

ರಾಜ್ಯದಲ್ಲಿ 20ಕ್ಕೆ ಏರಿದ ಕೊರೋನ ಸೋಂಕಿತರ ಸಂಖ್ಯೆ

Update: 2020-03-21 20:27 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.21: ರಾಜ್ಯದಲ್ಲಿ ಕೋವಿಡ್-19(ಕೊರೋನ) ಪ್ರಕರಣಗಳು ಶನಿವಾರ 5 ದೃಢಪಟ್ಟಿದ್ದು, ಇದೀಗ ಸೋಂಕಿತರ ಸಂಖ್ಯೆ 20ಕ್ಕೆ (ಮೃತಪಟ್ಟ ವ್ಯಕ್ತಿಯೂ ಸೇರಿದಂತೆ) ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಶನಿವಾರ ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಶನಿವಾರ ಒಟ್ಟು 170 ಜನರ ಮಾದರಿಯನ್ನು ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 26 ನೆಗಟಿವ್ ಬಂದಿದ್ದರೆ, 5 ಜನರಲ್ಲಿ ಸೋಂಕಿರುವುದು ದೃಢಪಟ್ಟಿದೆ. ಅವರಿಗೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ 53 ವರ್ಷದ ಮಹಿಳೆ, ನೆದರ್‌ಲ್ಯಾಂಡ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ 39 ವರ್ಷದ ವ್ಯಕ್ತಿ, ಸ್ಕಾಟ್‌ಲ್ಯಾಂಡ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ 21 ವರ್ಷದ ವ್ಯಕ್ತಿ, ಮಕ್ಕಾದಿಂದ ಹಿಂದಿರುಗಿದ ಚಿಕ್ಕಬಳ್ಳಾಪುರ ಮೂಲದ 31 ವರ್ಷದ ವ್ಯಕ್ತಿ ಹಾಗೂ ದುಬೈನಿಂದ ಮೈಸೂರಿಗೆ ಆಗಮಿಸಿದ್ದ 35 ವರ್ಷದ ವ್ಯಕ್ತಿಯೊಬ್ಬರಲ್ಲಿ ಈ ಸೋಂಕು ದೃಢಪಟ್ಟಿದೆ, ಎಲ್ಲರನ್ನೂ ಐಸೋಲೇಷನ್‌ನಲ್ಲಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದುವರೆಗೂ ರಾಜ್ಯದಲ್ಲಿ 4,681 ಜನರ ಮೇಲೆ ನಿಗಾವಹಿಸಲಾಗಿದ್ದು, 1,356 ಜನರು 28 ದಿನಗಳ ನಿಗಾದಿಂದ ಬಿಡುಗಡೆಗೊಂಡಿದ್ದಾರೆ. 146 ಜನರು ಐಸೋಲೇಶನ್ ಘಟಕಗಳಲ್ಲಿದ್ದಾರೆ. ಒಟ್ಟಾರೆ 1,377 ಜನರಿಂದ ಮಾದರಿ ಪಡೆದಿದ್ದು, ಅದರಲ್ಲಿ 996 ನೆಗಟಿವ್ ಬಂದಿದ್ದರೆ, 20 ಕೊರೋನ ಸೋಂಕಿರುವುದು ದೃಢಪಟ್ಟಿದೆ.

ರಾಜ್ಯದಲ್ಲಿ 48 ಸರಕಾರಿ ಆಸ್ಪತ್ರೆಗಳು ಹಾಗೂ 35 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್-19 ಶಂಕಿತ ಮತ್ತು ಪ್ರಕರಣಗಳ ನಿರ್ವಹಣೆಗಾಗಿ ಪ್ರಥಮ ಪ್ರತಿಕ್ರಿಯಾ ಆಸ್ಪತ್ರೆಗಳನ್ನಾಗಿ ಗುರುತಿಸಲಾಗಿದೆ. ಆನ್‌ಲೈನ್ ಮಾರ್ಕೆಟಿಂಗ್ ಸೇವೆ ಒದಗಿಸಲಾಗಿದೆ.

ಸಹಾಯವಾಣಿ: ಕೋವಿಡ್-19 ಕುರಿತ ಕರೆಗಳಿಗಾಗಿ 210 ಆಸನಗಳನ್ನು ಮೀಸಲಿರಿಸಲಾಗಿದೆ. ಇದುವರೆಗೂ 45,047 ಕರೆಗಳನ್ನು ಸಹಾಯವಾಣಿ ಸಂಖ್ಯೆ 104ಕ್ಕೆ ಬಂದಿದ್ದು, ಎಲ್ಲ ಕರೆಗಳಿಗೂ ಅಗತ್ಯ ಮಾರ್ಗದರ್ಶನ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News