ಕೊರೋನ ಭೀತಿ: ಕೊಡಗಿನಲ್ಲಿ ಮದ್ಯ ಮಾರಾಟ, ಹೊಟೇಲ್‌ ಗಳಿಗೆ ನಿರ್ಬಂಧ

Update: 2020-03-21 17:32 GMT
ಜಿಲ್ಲಾಧಿಕಾರಿ ಕಣ್ಮಣಿ ಜಾಯ್

ಮಡಿಕೇರಿ, ಮಾ.21: ಕೊಡಗು ಜಿಲ್ಲೆಯಲ್ಲಿ ಕೊರೋನ ಸೋಂಕಿನ ಒಂದು ಪ್ರಕರಣ ಪತ್ತೆಯಾದ ಬೆನ್ನಲ್ಲೇ ಕೊಡಗು ಜಿಲ್ಲಾಡಳಿತ ಸೋಂಕು ಹರಡುವುದನ್ನು ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಾ.21ರಿಂದ 31ರ ವರೆಗೆ ಜಿಲ್ಲೆಯ ಗಡಿ ಭಾಗದಲ್ಲಿರುವ ಎಲ್ಲಾ ಮಾದರಿಯ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. 

ಜಿಲ್ಲೆಯಲ್ಲಿ ಚಿಲ್ಲರೆ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ. ಅಲ್ಲದೆ, ಚಿಲ್ಲರೆ ಮದ್ಯ ಮಾರಾಟ ಮಾಡುವ ಅಂಗಡಿಗಳಲ್ಲಿ ಜನ ಸಂದಣಿ ಸೇರದಂತೆ ಕ್ರಮವಹಿಸಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದೆ.

ಸಂಜೆ 4 ಗಂಟೆಯಿಂದ ಜಿಲ್ಲೆಯಲ್ಲಿರುವ ಎಲ್ಲಾ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು, ಕೆಫೆಗಳಲ್ಲಿ ಸಾರ್ವಜನಿಕರು ಕುಳಿತುಕೊಂಡು ಆಹಾರ ಸೇವಿಸುವುದಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಕೇವಲ ಅಡುಗೆ ಮನೆಗಳು ಮಾತ್ರವೇ ಕಾರ್ಯಾಚರಿಸುತ್ತಿದ್ದು, ಹೊಟೇಲ್, ರೆಸ್ಟೋರೆಂಟ್, ಕೆಫೆಗಳಲ್ಲಿ ಪಾರ್ಸಲ್ ಸೇವೆ ಮಾತ್ರವೇ ಜಾರಿಯಲ್ಲಿದ್ದು, ಆಹಾರಗಳನ್ನು ಹೊರ ತೆಗೆದುಕೊಂಡು ಹೋಗಿ ಸೇವಿಸಬಹುದಾಗಿದೆ.

ಪಾರ್ಸಲ್ ಪಡೆಯುವ ಸಂದರ್ಭ ಆ ವ್ಯಕ್ತಿಯಿಂದ ಕನಿಷ್ಟ 6 ಅಡಿ ಅಂತರವನ್ನು ಕಾಪಾಡಿಕೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಆದೇಶ ಜಾರಿಯಾದ ತಕ್ಷಣದಿಂದಲೇ ಮಡಿಕೇರಿ ನಗರದ ಹಲವಾರು ಹೊಟೇಲ್‌ಗಳು ಬಾಗಿಲು ಎಳೆದುಕೊಂಡಿದ್ದು, ಕೆಲಸದವರಿಗೆ ರಜೆ ನೀಡಿದೆ. ಜನರೇ ಇಲ್ಲದೇ ವ್ಯಾಪಾರ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಅನುಸರಿಸಲಾಗಿದೆ ಎಂದು ಹೊಟೇಲ್ ಉದ್ಯಮಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News