×
Ad

ಮೈಸೂರಿನ ವ್ಯಕ್ತಿಗೆ ಕೊರೋನ ದೃಢ: ಜಿಲ್ಲಾಧಿಕಾರಿ ಅಭಿರಾಮ್ ಶಂಕರ್

Update: 2020-03-21 23:13 IST

ಮೈಸೂರು, ಮಾ.21: ಕೊರೋನ ಮಹಾಮಾರಿ ಮೈಸೂರಿನ ವ್ಯಕ್ತಿಗೂ ತಗುಲಿದ್ದು, ಶಂಕಿತ ವ್ಯಕ್ತಿ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸಂಜೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮೈಸೂರು ಮೂಲದ ವ್ಯಕ್ತಿ ದುಬೈನಿಂದ ಆಗಮಿಸಿದ್ದು ಅವರ ರಕ್ತ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಿದಾಗ ಕೊರೋನ ಇರುವುದು ದೃಢಪಟ್ಟಿದೆ ಎಂದು ತಿಳಿಸಿದರು.

ಅವರು ದುಬೈನಿಂದ ಗುರುವಾರ ರಾತ್ರಿ 11.30ಕ್ಕೆ ಹೊರಟು ಶುಕ್ರವಾರ ಬೆಳಗ್ಗೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿಗೆ ಬರುವ ಮುನ್ನ ಗೋವಾ ಮಾರ್ಗವಾಗಿ ಆಗಮಿಸಿದ್ದು ಗೋವಾದಲ್ಲಿ ಸ್ವಲ್ಪ ಸಮಯ ವಿಮಾನ ಲ್ಯಾಂಡ್ ಅಗಿದೆ. ನಂತರ ಬೆಂಗಳೂರಿಗೆ ಬಂದ ಇವರು ಖಾಸಗಿ ಟ್ಯಾಕ್ಸಿಯಲ್ಲಿ ನೇರವಾಗಿ ಮೈಸೂರಿಗೆ ಆಗಮಿಸಿದ್ದಾರೆ. ಮಾರ್ಗ ಮಧ್ಯೆ ಇವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ನೇರವಾಗಿ ಕೆ.ಆರ್.ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರು.

ದುಬೈನಲ್ಲೇ ಇವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು ಎಂದು ತಿಳಿದು ಬಂದಿದೆ. ಬೆಂಗಳೂರಿಗೆ ಬಂದ ಇವರು ಟ್ಯಾಕ್ಸಿ ಮೂಲಕ ಮೈಸೂರಿಗೆ ಆಗಮಿಸುವ ವೇಳೆ ಮಂಡ್ಯದಲ್ಲಿ ಕಾಫಿ ಕುಡಿಯಲು ನಿಲ್ಲಿಸಿದ್ದಾರೆ. ನಂತರ ಕೆ.ಆರ್.ಆಸ್ಪತ್ರೆಯ ರಿಸೆಪ್ಷನ್ ಸೆಂಟರ್ ಗೆ ಆಗಮಿಸಿ ನಂತರ ದಾಖಲಾಗಿದ್ದಾರೆ. ಈ ವೇಳೆ ಇವರನ್ನು ತಪಾಸಣೆ ಮಾಡಿದ ವೈದ್ಯರು ಮತ್ತು ಸಿಬ್ಬಂದಿಗಳು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದರು. 

ದುಬೈಗೆ ಯಾಕೆ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಬೇಕಿದೆ. ಇವರು ಎಲ್ಲೆಲ್ಲಿ ಹೋಗಿದ್ದರು ಯಾರ್ಯಾರನ್ನು ಮಾತನಾಡಿಸಿದ್ದರು ಎಂಬ ಮಾಹಿತಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಪಡೆಯುತ್ತಿದ್ದಾರೆ. ನಂತರವಷ್ಟೇ ಅವರ ರೂಟ್ ಮ್ಯಾಪ್ ಅನ್ನು ಬಿಡುಗಡೆ ಮಾಡಲಾಗುವುದು. ಸದ್ಯ ಅವರು ಬಂದಿರುವ ಟ್ಯಾಕ್ಸಿ ಚಾಲಕನನ್ನು ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದೇವಾದರೂ ಅವರ ಫೋನ್ ಸ್ವಿಚ್ ಆಫ್ ಬರುತ್ತಿದೆ. ಆದರೂ ಟ್ಯಾಕ್ಸಿಯ ಕಂಪನಿಗೆ ವಿಷಯ ತಿಳಿಸಿದ್ದು ಚಾಲಕನನ್ನು ಪತ್ತೆ ಹಚ್ಚಲು ಪ್ರಯತ್ನಪಡಲಾಗುತ್ತಿದೆ ಎಂದು ಹೇಳಿದರು.

ಏರ್ ಇಂಡಿಯಾ ವಿಮಾನದಲ್ಲಿ ಬೆಂಗಳೂರಿಗೆ ಬಂದಿರುವುದಾಗಿ ಹೇಳಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿರುವವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದೇವೆ. ಈ ಸಂಬಂಧ ಏರ್ ಇಂಡಿಯಾ ಅಧಿಕಾರಿಗಳಗೆ ಮಾಹಿತಿ ಕೊಟ್ಟಿದ್ದೇವೆ. ಅವರು ಒಬ್ಬರೆ ಬಂದಿದ್ದಾರೆ. ಈಗಾಗಲೇ ಅವರ ಮನೆಯವರಿಗೆ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಇವರನ್ನು ಏರ್‍ಪೋರ್ಟ್‍ನಲ್ಲಿ ಚೆಕ್ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಅಲ್ಲಿ ಯಾಕೆ ವೈರಾಣು ಪತ್ತೆಯಾಗಲಿಲ್ಲ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಒಟ್ಟು 240 ವ್ಯಕ್ತಿಗಳನ್ನು ನಿಗಾದಲ್ಲಿ ಇರಿಸಲಾಗಿದೆ. ಮನೆಯಲ್ಲಿ 170 ವ್ಯಕ್ತಿಗಳನ್ನು ನಿಗಾದಲ್ಲಿ ಇಡಲಾಗಿದೆ. ಇಬ್ಬರನ್ನು ಆಸ್ಪತ್ರೆಯಲ್ಲಿ ನಿಗಾ ಇರಿಸಲಾಗಿದೆ. 14 ದಿನ ನಿಗಾ ಮುಗಿಸಿದವರು 63 ಮಂದಿ. 31 ಜನರ ಸ್ಯಾಂಪಲ್‍ನಲ್ಲಿ 1 ಪಾಸಿಟಿವ್ ಬಂದಿದೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News