ಕೊರೋನ ಸಂಹಾರಕ್ಕೆ ಜೀವಂತ ದೇಹ ದಾನ ಮಾಡಲು ಮುಂದಾದ ರಾಜ್ಯದ ವಕೀಲ !
Update: 2020-03-21 23:42 IST
ಚಾಮರಾಜನಗರ, ಮಾ.21: ಕೊರೋನ ವೈರಸ್ ನಿಗ್ರಹಕ್ಕೆ ಚುಚ್ಚು ಮದ್ದು ಕಂಡುಹಿಡಿಯಲು ದೇಹದಾನ ಮಾಡಲು ಜಿಲ್ಲೆಯ ಕೊಳ್ಳೇಗಾಲದ ವಕೀಲರೊಬ್ಬರು ಮುಂದೆ ಬಂದಿರುವ ಘಟನೆ ನಡೆದಿದೆ.
ಕೊರೋನ ವೈರಸ್ ಮನುಷ್ಯ ಸಂತತಿಯನ್ನೇ ನಾಶ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಕೊಳ್ಳೇಗಾಲದ ವಕೀಲ ಬಸವರಾಜು, ಕೊರೋನ ವೈರಸ್ ನಿಗ್ರಹಕ್ಕೆ ಚುಚ್ಚುಮದ್ದನ್ನು ಪರೀಕ್ಷೆ ಮಾಡಲು ತಮ್ಮ ಜೀವಂತ ದೇಹವನ್ನು ಬಳಸಿಕೊಳ್ಳಬಹುದೆಂದು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಜೀವಂತ ದೇಹದಾನ ಮಾಡಲು ಮುಂದಾಗಿರುವ ವಕೀಲ ಬಸವರಾಜು ತಮ್ಮ ದೇಹಕ್ಕೆ ಕೊರೋನ ವೈರಸ್ ಇಂಜೆಕ್ಟ್ ಮಾಡಿ, ಬಳಿಕ ಚುಚ್ಚುಮದ್ದನ್ನು ಪ್ರಯೋಗಿಸಿ ಮಹಾಮಾರಿಗೆ ಯಶಸ್ವಿ ಔಷಧ ಕಂಡು ಹಿಡಿದು ಜಗತ್ತನ್ನು ರಕ್ಷಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡಿರುವ ಅವರು ತನ್ನ ದೇಹವನ್ನು ಬಳಸಿಕೊಳ್ಳಿ, ಚುಚ್ಚುಮದ್ದನ್ನು ಕಂಡು ಹಿಡಿಯಿರಿ ಎಂದಿದ್ದಾರೆ.