ನಿಷೇಧಿತ ಕ್ಯಾಟ್‌ಫಿಶ್ ಅಕ್ರಮ ಸಾಗಾಟ: ಲಾರಿ ಸಹಿತ ಮೂವರ ಬಂಧನ

Update: 2020-03-21 18:17 GMT

ಮಡಿಕೇರಿ, ಮಾ. 21: ಕೊಡಗಿನ ಮೂಲಕ ಬೆಂಗಳೂರಿಗೆ ನಿಷೇಧಿತ ಕ್ಯಾಟ್‌ಫಿಶ್ ಸಾಗಾಟ ಮಾಡುತ್ತಿದ್ದವರನ್ನು ಜಿಲ್ಲಾ ಅಪರಾಧ ಪತ್ತೆ ದಳ ಪೊಲೀಸರು ಬಂಧಿಸಿ ಲಾರಿ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಮಧ್ಯಪ್ರದೇಶದ ವಿ.ಕೆ. ನೇಮಿಚಂದ್ ಉಯಿಕೆ, ಕ್ಲೀನರ್ ಸೋಮ್‌ಲಾಲ್ ಉಯಿಕೆ ಹಾಗೂ ಚಿಕ್ಕಬಳ್ಳಾಪುರದ ಕೂಲಿ ಕಾರ್ಮಿಕ ಆಂಜಪ್ಪ ಎಂಬವರನ್ನು ಬಂಧಿಸಿದ್ದು, ಲಾರಿ ಸಹಿತ ಲಕ್ಷಾಂತರ ರೂ. ಮೌಲ್ಯದ ಕ್ಯಾಟ್ ಫಿಷ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಶಕ್ಕೆ ಪಡೆದ ಸೊತ್ತುಗಳನ್ನು ಮೀನುಗಾರಿಕ ಇಲಾಖೆಯ ಸಹಾಯಕ ನಿರ್ದೇಶಕರ ವಶಕ್ಕೆ ಒಪ್ಪಿಸಲಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದು ಮಂಗಳೂರು ಬಳಿಯ ಬಿ.ಸಿ. ರೋಡ್‌ನಿಂದ ಮಡಿಕೇರಿ ಮಾರ್ಗವಾಗಿ ಬೆಂಗಳೂರಿಗೆ 16 ಚಕ್ರದ ಲಾರಿಯೊಂದರಲ್ಲಿ 3 ಟನ್ ಕ್ಯಾಟ್ ಫಿಶ್‌ಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಕಾರ್ಯಪ್ಪ ವೃತ್ತದ ಬಳಿ ಲಾರಿಯನ್ನು ತಪಾಸಣೆಗೆ ಒಳಪಡಿಸಿದಾಗ ಲಾರಿಯಲ್ಲಿ ನಿಷೇಧಿತ ಕ್ಯಾಟ್ ಫಿಷ್‌ಗಳಿರುವುದು ಪತ್ತೆಯಾಗಿವೆ. ಅಲ್ಲದೆ, 16 ಚಕ್ರದ ಲಾರಿಯನ್ನೇ ಕ್ಯಾಟ್‌ಫಿಶ್ ಸಾಗಾಟಕ್ಕೆ ನೀರಿನ ಟ್ಯಾಂಕ್ ಮಾದರಿಯಲ್ಲಿ ಪರಿವರ್ತಿಸಲಾಗಿತ್ತು. ಕೆಲವು ಮೀನುಗಳು ಸತ್ತು ತೇಲುತ್ತಿದ್ದರೆ, ಸಾವಿರಾರು ಸಂಖ್ಯೆಯಲ್ಲಿ ಜೀವಂತ ಮೀನುಗಳು ಕಂಡು ಬಂದವು. ಮೂಲತಃ ಹಾಸನ ಮೂಲದ ವ್ಯಕ್ತಿ ಬಿ.ಸಿ. ರೋಡ್ ಬಳಿ ಕ್ಯಾಟ್‌ಫಿಷ್‌ಗಳನ್ನು ಸಾಕುತ್ತಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News