×
Ad

ರಾಜ್ಯದಲ್ಲಿ ಒಂದೇ ದಿನ 6 ಕೊರೋನ ಪ್ರಕರಣ ದೃಢ: ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆ

Update: 2020-03-22 19:50 IST

ಬೆಂಗಳೂರು, ಮಾ.22: ಕೊರೋನ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು, ರವಿವಾರ ಒಂದೇ ದಿನ 6 ಪ್ರಕರಣ ದೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.

ಬೆಂಗಳೂರಿನಲ್ಲಿ ಮೂವರು, ಧಾರವಾಡ, ಚಿಕ್ಕಬಳ್ಳಾಪುರ ಹಾಗೂ ಉತ್ತರ ಕನ್ನಡದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸೋಂಕಿತ ವ್ಯಕ್ತಿಗಳಲ್ಲಿ ಗುಣಮುಖರಾಗಿ ಮನೆಗೆ ತೆರಳಿದ್ದ ವೇಳೆಯಲ್ಲಿಯೇ, ಮತ್ತೆ ಆರು ಜನರಲ್ಲಿ ಈ ಸೋಂಕು ದೃಢಪಟ್ಟಿರುವುದು ಮತ್ತಷ್ಟು ಭೀತಿ ಸೃಷ್ಟಿಸಿದೆ.

ಧಾರವಾಡ ಮೂಲದ 35 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಅವರು ದುಬೈನಿಂದ ಧಾರವಾಡಕ್ಕೆ ಬಂದಿದ್ದರು. ಗೌರಿಬಿದನೂರಿನ 22 ವರ್ಷದ ಯುವತಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಸೌದಿಯ ಮಕ್ಕಾದಿಂದ ಮಾ. 14ರಂದು ಹೈದರಾಬಾದ್‌ಗೆ ಬಂದು, ರೈಲಿನಿಂದ ಹಿಂದುಪುರಕ್ಕೆ ಆಗಮಿಸಿದ್ದು, ಅನಂತರ ಬಸ್ ಮೂಲಕ ಗೌರಿಬಿದನೂರು ತಲುಪಿದ್ದಾರೆ.

ಬೆಂಗಳೂರು ಮೂಲದ 27 ವರ್ಷದ ವ್ಯಕ್ತಿಯೊಬ್ಬರು ಜರ್ಮನಿಗೆ ಪ್ರವಾಸ ಮಾಡಿದ್ದು, ಮಾ.14 ರಂದು ಬೆಂಗಳೂರಿಗೆ ವಾಪಸ್ಸಾಗಿದ್ದರು. ಮತ್ತೊಬ್ಬರು 51 ವರ್ಷದ ಪುರುಷರೊಬ್ಬರು ಲಂಡನ್‌ನಿಂದ ಮಾ.13 ರಂದು ವಾಪಸ್ಸಾಗಿದ್ದರು ಹಾಗೂ ಇನ್ನೊಬ್ಬರು ಸ್ವಿಝರ್‌ಲ್ಯಾಂಡ್ ಹಾಗೂ ಪ್ರಾನ್ಸ್‌ಗೆ ಪ್ರಯಾಣ ಮಾಡಿದ್ದ 36 ವರ್ಷದ ಮಹಿಳೆಯು ಮಾ.9 ರಂದು ವಾಪಸ್ಸಾಗಿದ್ದರು. ಈಗ ಈ ಮೂರು ಜನರು ನಗರದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ 22 ವರ್ಷದ ಯುವಕನೊಬ್ಬ ದುಬೈನಿಂದ ಮಾ.19 ರಂದು ಆಗಮಿಸಿದ್ದು, ಅವರಲ್ಲಿ ಕೊರೋನ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ರವಿವಾರ 1406 ಮಂದಿಯನ್ನು ಅವಲೋಕನೆಗಾಗಿ ಪಟ್ಟಿ ಮಾಡಲ್ಪಟ್ಟಿದ್ದು, 470 ಮಂದಿಯನ್ನು ಮನೆಯಲ್ಲಿ ಹಾಗೂ 38 ಮಂದಿಯನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. ಪರೀಕ್ಷೆಗಾಗಿ 10 ಜನರ ರಕ್ತ ಮಾದರಿ ಕಳಿಸಲಾಗಿದ್ದು, ಅದರಲ್ಲಿ 6 ಮಾದರಿ ದೃಢಪಟ್ಟಿವೆ.

ಹೋಂ ಕ್ವಾರಂಟೈನ್ ಸೀಲ್: ಕೊರೋನ ವೈರಸ್ ಸೋಂಕಿತ ದೇಶಗಳಿಂದ ಕಳೆದ 14 ದಿನಗಳಿಂದೀಚೆಗೆ ಆಗಮಿಸಿ ಮನೆಯಲ್ಲೇ ಪ್ರತ್ಯೇಕವಾಗಿರುವ ವ್ಯಕ್ತಿಗಳಿಗೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ರವಿವಾರದಿಂದ ‘ಹೋಂ ಕ್ವಾರಂಟೈನ್ ಸೀಲ್’ (ಗೃಹ ಬಂಧನ ಮುದ್ರೆ) ಒತ್ತುವ ಮೂಲಕ ಕಟ್ಟೆಚ್ಚರ ವಹಿಸಲಾಗಿತ್ತು.

ಸ್ಥಳೀಯ ಪೊಲೀಸ್, ಕಂದಾಯ, ಪುರಸಭೆ, ಆರೋಗ್ಯ ಇಲಾಖೆ ಸಿಬ್ಬಂದಿ ಒಳಗೊಂಡ 500 ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಅವರು ಮುದ್ರೆ ಒತ್ತುವುದು ಮಾತ್ರವಲ್ಲದೆ ನೆರೆಹೊರೆಯವರಿಗೆ ನೋಟಿಸ್ ನೀಡಲಿದ್ದಾರೆ. ಅಲ್ಲದೆ ವ್ಯಕ್ತಿಯು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡದಂತೆ ನಿಗಾ ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News