ಧಾರವಾಡದಲ್ಲಿ ಮೊದಲ ಕೊರೋನ ಪ್ರಕರಣ ಪತ್ತೆ: ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

Update: 2020-03-22 14:37 GMT
ಸಾಂದರ್ಭಿಕ ಚಿತ್ರ

ಧಾರವಾಡ, ಮಾ.22: ಆಸ್ಟ್ರೇಲಿಯಾ, ದುಬೈ, ಮಸ್ಕತ್ ಹಾಗೂ ಗೋವಾ ಮೂಲಕ ಧಾರವಾಡ ನಗರಕ್ಕೆ ಆಗಮಿಸಿದ್ದ ಓರ್ವ ವ್ಯಕ್ತಿಯಲ್ಲಿ ಕೋವಿಡ್- 19 ಪಾಸಿಟಿವ್ ಇರುವುದು, ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ವಿದೇಶ ಪ್ರವಾಸದಿಂದ ಆಗಮಿಸಿದ್ದ ಈ ವ್ಯಕ್ತಿಯು ಮಾ.12ರಂದು ಧಾರವಾಡ ನಗರಕ್ಕೆ ಆಗಮಿಸಿದ್ದರು. ಶಂಕಿತ ಕೋವಿಡ್- 19ರ ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ, ಮಾ.18ರಂದು ಅವರು ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅದೇ ದಿನ ಅವರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ತಪಾಸಣೆಗಾಗಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ಪ್ರಯೋಗಾಲಯ ವರದಿ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದರು.

ಸೋಂಕು ದೃಢಪಟ್ಟಿರುವ ವ್ಯಕ್ತಿಯು ಧಾರವಾಡ ನಗರದ ಹೊಸಯಲ್ಲಾಪುರ ಪ್ರದೇಶಕ್ಕೆ ಸೇರಿದ 33 ವರ್ಷ ವಯಸ್ಸಿನ ಪುರುಷನಾಗಿದ್ದಾರೆ. ಹೊಸಯಲ್ಲಾಪುರ ಪ್ರದೇಶವನ್ನು ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ಅಲ್ಲಿಂದ ಸುತ್ತಮುತ್ತಲಿನ 3 ಕಿಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಈ ವ್ಯಕ್ತಿಗೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಕಂಡು ಬಂದ ಸ್ಥಳದ ಸುತ್ತಮುತ್ತ ನಿಯಮಾನುಸಾರ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಈ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಈಗಾಗಲೇ ಕೊರೋನ ವೈರಸ್ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನತೆ ಆತಂಕಕ್ಕೆ ಒಳಗಾಗಬಾರದು, ಸಾಮಾಜಿಕ ಅಂತರ ಹಾಗೂ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಸಾಧ್ಯವಾದಷ್ಟು ತಮ್ಮ ಮನೆಗಳಲ್ಲಿಯೇ ಇರುವುದರ ಮೂಲಕ ವೈರಾಣು ತಡೆಯಲು ತಮ್ಮ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News