×
Ad

ಕೆಎಸ್ಸಾರ್ಟಿಸಿ: ಮಾ.31ರವರೆಗೆ ಹೊರ ರಾಜ್ಯಗಳ ಸಾರಿಗೆ ಬಂದ್

Update: 2020-03-22 21:33 IST

ಬೆಂಗಳೂರು, ಮಾ.22: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದ ಮಾ.31ರವರೆಗೆ ಹೊರ ರಾಜ್ಯಗಳ ಕೆಎಸ್ಸಾರ್ಟಿಸಿಯ ಎಲ್ಲ ಸಾರಿಗೆಗಳನ್ನು ಬಂದ್ ಮಾಡಲಾಗಿದೆ.

ರಾಜ್ಯ ಸರಕಾರ ಕೊರೋನ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅದಕ್ಕೆ ಪೂರಕವಾಗಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ,ಗೋವಾ, ಮಹಾರಾಷ್ಟ್ರ, ಪಾಂಡೀಚೆರಿ ಸೇರಿ ಹೊರರಾಜ್ಯದ ಎಲ್ಲ ಸಾರಿಗೆಗಳ ಸೇವೆಯನ್ನು ಇಂದಿನಿಂದ ಜಾರಿಗೆ ಬರುವಂತೆ ಬಂದ್ ಮಾಡಲಾಗಿದೆ ಎಂದು ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.

ಸಾರಿಗೆ ಸಿಬ್ಬಂದಿಗಳಿಗೆ ಮಾಸ್ಕ್ ಪೂರೈಕೆ ಮಾರುಕಟ್ಟೆಯಲ್ಲಿ ಲಭ್ಯತೆಯ ಕೊರತೆ ಇರುವುದರಿಂದ, ಚಾಮರಾಜನಗರ, ದಾವಣಗೆರೆ, ಕೋಲಾರ, ಮೈಸೂರು ನಗರ ಸಾರಿಗೆ ವಿಭಾಗ, ಮೈಸೂರು ಗ್ರಾಮಾಂತರ, ತುಮಕೂರು ಚ್ಕಿಕಮಗಳೂರು, ಮಂಗಳೂರು ವಿಭಾಗಗಳಲ್ಲಿ ಸಿಬ್ಬಂದಿಗಳು ತಾವೇ ಮಾಸ್ಕ್ ತಯಾರಿಸುತ್ತಿದ್ದಾರೆ.

ರಾಜ್ಯದಲ್ಲಿ ಕೊರೋನ ಸೋಂಕು ಪತ್ತೆಯಾದಾಗಿನಿಂದ ಇಲ್ಲಿಯವರೆಗೆ ಕೆಎಸ್ಸಾರ್ಟಿಸಿ ಸಂಸ್ಥೆಗೆ ಸುಮಾರು 13.35 ಕೋಟಿ ರೂ.ನಷ್ಟವಾಗಿದೆ. ಮಾ.1ರಿಂದ ಇಲ್ಲಿಯವರೆಗೆ ಮುಂಗಡ ಕಾಯ್ದಿರಿಸಿರುವ ಪ್ರಯಾಣಿಕರು ಒಟ್ಟು 54,480 ಟಿಕೆಟ್‌ಗಳನ್ನು ರದ್ದು ಮಾಡಿದ್ದಾರೆ.

ಕೆಎಸ್ಸಾರ್ಟಿಸಿ ನಿಗಮದ ಸಿಬ್ಬಂದಿಗಳಿಗೆ ಹಾಗೂ ಅವರ ಪರಿವಾರದವರಿಗೆ ಮೀಸಲಿರುವ ಇಲ್ಲಿನ ಜಯನಗರದಲ್ಲಿರುವ ಆಸ್ಪತ್ರೆಗೆ ಸಂಸ್ಥೆಯ ವ್ಯವಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಭೇಟಿ ನೀಡಿ, ಆಸ್ಪತ್ರೆಯಲ್ಲಿನ ಸೌಲಭ್ಯಗಳು, ಔಷಧಿಗಳು, ಸ್ವಚ್ಛತಾ ವ್ಯವಸ್ಥೆಗಳ ಬಗ್ಗೆ ಅಲ್ಲಿರುವ ವೈದ್ಯರಿಂದ ಮಾಹಿತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News