ದ.ಕ ಜಿಲ್ಲೆಯಲ್ಲಿ ವಿದೇಶದಿಂದ ಆಗಮಿಸಿದ 2000 ಪ್ರಯಾಣಿಕರ ಮೇಲೆ ನಿಗಾ: ಸಿಂಧೂ ಬಿ ರೂಪೇಶ್
ಮಂಗಳೂರು,ಮಾ.22: ಇದುವರೆಗೆ ಜಿಲ್ಲೆಯಲ್ಲಿ ಒಂದು ಕೊರೋನಾ ಸೋಂಕು ಇರುವ ಪ್ರಕರಣ ಪತ್ತೆಯಾಗಿರುವುದನ್ನು ಬಿಟ್ಟರೆ ಬೇರೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ವಿದೇಶದಿಂದ ಆಗಮಿಸಿದ 2000 ಮಂದಿಯನ್ನು ಅವರ ನಿವಾಸಗಳಲ್ಲಿ ನಿಗಾದಲ್ಲಿ ಇಡಲಾಗಿದೆ. ಅವರು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವುದನ್ನು ನಿಯಂತ್ರಿಸಲು ಸೂಚನೆ ನೀಡಲಾಗಿದೆ. ಮತ್ತು ಅವರ ಆರೋಗ್ಯದ ಬಗ್ಗೆ ಜಿಲ್ಲಾಡಳಿತದಿಂದ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕೋವಿಡ್-19 ರೋಗದ ನಿಯಂತ್ರಣದ ಹಿನ್ನೆಯಲ್ಲಿ ಪ್ರಧಾನಿ ನೀಡಿದ ಕರೆಯಂತೆ ಜಿಲ್ಲೆಯಲ್ಲಿ ಜನತಾ ಕರ್ಫ್ಯೂಗೆ ಜನರು ಉತ್ತಮ ಪ್ರತಿಕ್ರಿಯೆ ನೀಡಿ ಯಶಸ್ಸಿಗೊಳಿಸಿದ್ದಾರೆ.ಇದೇ ರೀತಿ ಮಾರ್ಚ್ 31ರವರೆಗೂ ಜನರು ಸ್ವಯಂ ಪ್ರೇರಿತರಾಗಿ ಅಂಗಡಿ ಮಳಿಗೆಗಳನ್ನು ಮುಚ್ಚಿ ಸಹಕಾರ ನೀಡಬೇಕು ಎಂದು ಜಿಲ್ಲಾ ಧಿಕಾರಿ ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಇಂದಿನಿಂದ ಅಂತಾರಾಷ್ಟ್ರೀಯ ವಿಮಾನ ಆಗಮನ ಸಂಪೂರ್ಣ ನಿಲುಗಡೆಯಾಗಲಿದೆ. ಇಂದು 6.30 ಗಂಟೆಗೆ ದುಬೈಯಿಂದ 109 ಮಂದಿ ಪ್ರಯಾಣಿಕರು ಹೊಂದಿರುವ ಅಂತಾರಾಷ್ಟ್ರೀಯ ವಿಮಾನ ಮಂಗಳೂರಿಗೆ ಆಗಮಿಸಿದೆ. ಇನ್ನು ವಿಮಾನಗಳು ಮುಂದಿನ ಸೂಚನೆಯವರೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
*ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
*ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲೆಗಳ ನಡುವಿನ ಬಸ್ ಸಂಚಾರವನ್ನು ಮಾರ್ಚ್ 31ರವರೆಗೆ ಸಂಪೂರ್ಣ ಬಂದ್ ಮಾಡಲಾಗುವುದು.
*ಆಹಾರ ಪದಾರ್ಥಗಳು, ಹಾಲು, ನೀರು, ಔಷಧಿ ಸೇರಿದಂತೆ ದಿನಬಳಕೆಯ ದಿನಸಿ ಸಾಮಾಗ್ರಿಳ ಅಂಗಡಿಗಳ ಹೊರತಾಗಿ ಎಲ್ಲಾ ಸೇವೆಗಳನ್ನು ರದ್ದು ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.