ಕೊರೋನ ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದ 13 ಮಂದಿ ನಿಗಾ ಘಟಕದಲ್ಲಿ: ಮೈಸೂರು ಜಿಲ್ಲಾಧಿಕಾರಿ
ಮೈಸೂರು,ಮಾ.22: ಮೈಸೂರಿನಲ್ಲಿ ಕೊರೋನ ಸೋಂಕು ತಗುಲಿರುವ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ 13 ಮಂದಿಯನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರವಿವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೋನ ಸೋಂಕಿತ ವ್ಯಕ್ತಿಗೆ ಕೆ.ಆರ್. ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ ವೈದ್ಯರು ಹೈ ರಿಸ್ಕ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಈ ವ್ಯಕ್ತಿಯನ್ನು ಹತ್ತಿರದಿಂದ ಸಂಪರ್ಕಿಸಿದ 13 ಮಂದಿಯನ್ನು ಗುರುತಿಸಲಾಗಿದೆ. ಮೈಸೂರಿನ 10, ಚಿಕ್ಕಬಳ್ಳಾಪುರದ 1, ಮಂಡ್ಯದ ಇಬ್ಬರನ್ನು ಮತ್ತು ಅವರ ಕುಟುಂಬದವರನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಕೊರೋನ ಪಾಸಿಟಿವ್ ವ್ಯಕ್ತಿ ಕಾಣಿಸಿಕೊಂಡಿರುವ ಹಿನ್ನೆಲೆ ಬಸ್ ಗಳ ಸೇವೆಯನ್ನು ಮಾ.31 ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ರಿಷ್ಯಂತ್, ಡಿಸಿಪಿ ಪ್ರಕಾಶ್ ಗೌಡ ಉಪಸ್ಥಿತರಿದ್ದರು.