ಜನತಾ ಕರ್ಫ್ಯೂಗೆ ಕೊಡಗು ಸ್ತಬ್ಧ: ಮಾ.31 ರವರೆಗೆ ಅಗತ್ಯ ಸೇವೆಗಳು ಮಾತ್ರ ಲಭ್ಯ
ಮಡಿಕೇರಿ, ಮಾ.22: ವಿಶ್ವವನ್ನೇ ಕಾಡುತ್ತಿರುವ ಕೊರೋನ ವೈರಸ್ ಭಾರತ ದೇಶದಲ್ಲೂ ವ್ಯಾಪಿಸುತ್ತಿರುವುದರಿಂದ ಪ್ರಧಾನಿ ಮೋದಿ ಅವರು ಕರೆ ನೀಡಿದ್ದ 'ಜನತಾ ಕರ್ಫ್ಯೂ'ಗೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆಯಿತು.
ಜಿಲ್ಲೆಯ ಮೂರೂ ತಾಲೂಕುಗಳು ಜನ ಮತ್ತು ವಾಹನ ಸಂಚಾರವಿಲ್ಲದೆ ಸ್ತಬ್ಧವಾಯಿತು. ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿ ನಗರದಲ್ಲಿ ಕೊರೋನ ಸೋಂಕು ತಡೆ ನಿರ್ವಹಣೆಯ ಅಧಿಕಾರಿಗಳ ಸಂಚಾರ ಬಿಟ್ಟರೆ ಬೇರೆ ಯಾವುದೇ ವಾಹನಗಳು ರಸ್ತೆಗಿಳಿಯಲಿಲ್ಲ. ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್‍ಗಳ ಸೇವೆ ಸ್ಥಗಿತಗೊಂಡಿತ್ತು. ಸೋಮವಾರಪೇಟೆ, ಕುಶಾಲನಗರ, ಸುಂಟಿಕೊಪ್ಪ, ಸಿದ್ದಾಪುರ, ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ ಸೇರಿದಂತೆ ಎಲ್ಲಾ ಊರುಗಳು ಜನ ಮತ್ತು ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು.
ಪೊಲೀಸರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪತ್ರಕರ್ತರ ಓಡಾಟವಷ್ಟೇ ಕಂಡು ಬಂತು. ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕೊಡಗಿನ ಗಡಿಭಾಗವಾದ ಕುಟ್ಟ, ಕರಿಕೆ ಚೆಕ್‍ಪೋಸ್ಟ್ ಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸಂಪಾಜೆ ಗೇಟ್ ಸೇರಿದಂತೆ ಜಿಲ್ಲೆಯಲ್ಲಿ ಕೊರೋನ ಸೋಂಕು ದೃಢಪಟ್ಟ ವ್ಯಕ್ತಿಯ ಊರಾದ ಕೊಂಡಂಗೇರಿ ಭಾಗದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಕಾನೂನು ಸುವ್ಯವಸ್ಥೆ ಬಗ್ಗೆ ನಿಗಾ ವಹಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಅವರು ಆರೋಗ್ಯ ಸಂಬಂಧಿತ ಚಟುವಟಿಕೆಗಳ ನೇತೃತ್ವ ವಹಿಸಿ ವೈದ್ಯಕೀಯ ಸಿಬ್ಬಂದಿಗಳಿಗೆ ನೆರವಾದರು.
ಮಾ.31 ರವರೆಗೆ ಮುಂದುವರಿಯಲಿದೆ ಅಸ್ಥಿರತೆ
ಭಾನುವಾರದ 'ಜನತಾ ಕರ್ಫ್ಯೂ' ಒಂದು ದಿನಕ್ಕೆ ಮುಗಿದಿದ್ದರೂ ಕೊರೋನ ಸೋಂಕಿತ ವ್ಯಕ್ತಿ ಪತ್ತೆಯಾದ ಕೊಡಗಿನಲ್ಲಿ ಮಾ.31 ರವರೆಗೆ ಮಾನವ ಜೀವನದ ಅಸ್ಥಿರತೆ ಮುಂದುವರೆಯಲಿದೆ. ಕೊಡಗು ಸೇರಿದಂತೆ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಬಂದ್ ಮುಂದುವರೆಸುವಂತೆ ಆದೇಶ ಬಂದಿರುವ ಹಿನ್ನೆಲೆ ಅಗತ್ಯ ವಸ್ತುಗಳ ಮಳಿಗೆಗಳು ಹೊರತು ಪಡಿಸಿ ಉಳಿದ ಎಲ್ಲಾ ಮಳಿಗೆಗಳು ಬಂದ್ ಆಗಲಿವೆ. ಅಲ್ಲದೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಕೂಡ ಸೋಮವಾರ ಮತ್ತು ಮಂಗಳವಾರ ಬಂದ್‍ಗೆ ಕರೆ ನೀಡಿರುವುದರಿಂದ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ಸೋಮವಾರ ಒಂದು ದಿನ ಸಾರಿಗೆ ವ್ಯವಸ್ಥೆ ಇರುವುದಿಲ್ಲವೆಂದು ಸರ್ಕಾರ ತಿಳಿಸಿದೆ.
ಪೆಟ್ರೋಲ್ ಬಂಕ್, ದಿನಸಿ ಅಂಗಡಿಗಳು, ಔಷಧಿ, ತರಕಾರಿ ಮಾತ್ರ ಲಭ್ಯವಿರಲಿದೆ. ಜನರು ಸಹಕರಿಸಬೇಕೆಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಬಿ.ದೇವಯ್ಯ ಮನವಿ ಮಾಡಿದ್ದಾರೆ.
ಕೊಂಡಂಗೇರಿಯಲ್ಲಿ ಮುಂದುವರಿದ ನಿರ್ಬಂಧ
ಕೊಡಗು ಜಿಲ್ಲೆಯಲ್ಲಿ ಕೊರೋನ ಸೋಂಕು ದೃಢಪಟ್ಟ ವ್ಯಕ್ತಿಯು ವಾಸವಾಗಿದ್ದ ಕೊಂಡಂಗೇರಿಯ ಕೇತುಮೊಟ್ಟೆ ಪ್ರದೇಶದ ಸುತ್ತ 500 ಮೀಟರ್ ಏರಿಯಾವನ್ನು ಕಂಟೈನ್ ಮೆಂಟ್ ಪ್ರದೇಶ ಎಂದು ಈಗಾಗಲೇ ಗುರುತಿಸಲಾಗಿದೆ. ಇಲ್ಲಿನ 75 ಮನೆಗಳ ನಿವಾಸಿಗಳಿಗೆ ಮನೆಗಳಿಂದ ಹೊರಗೆ ಬಾರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಆರೋಗ್ಯ ಇಲಾಖೆ ಸ್ಥಳೀಯ ನಿವಾಸಿಗಳ ಮೇಲೆ ನಿಗಾ ಇರಿಸಿದೆ.
ಸದರಿ ಪ್ರದೇಶದಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ನಿಗಾ ವಹಿಸಲಾಗಿದೆ. ದಿನ ಬಳಕೆಯ ಆಹಾರ ಪದಾರ್ಥ ಮತ್ತು ದಿನ ನಿತ್ಯದ ಶುಚಿತ್ವಕ್ಕೆ ಬೇಕಾದ ವಸ್ತುಗಳನ್ನು ಜಿಲ್ಲಾಡಳಿತದಿಂದ ಅವರವರ ಮನೆಗಳಿಗೆ ಮುಂದಿನ 14 ದಿನಗಳವರೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ತುರ್ತು ಔಷಧಿ ಮತ್ತಿತರ ಆರೋಗ್ಯ ಸಂಬಂಧಿತ ವಸ್ತುಗಳನ್ನು ಆರೋಗ್ಯ ಇಲಾಖೆ ಈ ಗ್ರಾಮಕ್ಕೆ ತಲುಪಿಸಿದೆ.