×
Ad

ಚಿಕ್ಕಮಗಳೂರು: ಕೊರೋನ ಭೀತಿಯ ನಡುವೆಯೂ ಪೌರಕಾರ್ಮಿಕರಿಂದ ಬರಿಗೈಯಲ್ಲಿ ಸ್ವಚ್ಚತಾ ಕೆಲಸ !

Update: 2020-03-22 23:39 IST

ಚಿಕ್ಕಮಗಳೂರು, ಮಾ.22: ಇಡೀ ದೇಶದಲ್ಲಿ ಕೊರೋನ ವೈರಸ್ ಸೋಂಕು ಹರಡುತ್ತಿರುವ ಆತಂಕ ಎಲ್ಲರನ್ನೂ ಕಾಡುತ್ತಿದೆ. ಸರಕಾರಗಳು ಈ ಸಂಬಂಧ ಜನಜಾಗೃತಿ ಕಾರ್ಯಕ್ರಮಗಳು ಆಯೋಜಿಸುತ್ತಿವೆ. ಜನತಾ ಕರ್ಫ್ಯೂದಂತಹ ಕಾರ್ಯಕ್ರಮಗಳನ್ನು ರವಿವಾರ ಆಚರಿಸಲಾಗಿದೆ. ಈ ಮಧ್ಯೆ ನಗರವನ್ನು ಸ್ವಚ್ಛವಾಗಿಟ್ಟು ಸಾರ್ವಜನಿಕರೂ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವನ್ನು ನಿರ್ಲಕ್ಷ್ಯ್ಯ ಮಾಡಿರುವುದು ಎಷ್ಟು ಸರಿ? ಕೊರೋನ ವೈರಸ್ ಹರಡುವ ಭೀತಿಯಿಂದ ಇಡೀ ದೇಶ ತಲ್ಲಣಗೊಂಡಿದ್ದರೂ ನಗರದಲ್ಲಿ ಸಮರ್ಪಕವಾಗಿ ನೈರ್ಮಲ್ಯ ಕಾಪಾಡುವಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ್ಯ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ. 

ನಗರದಲ್ಲಿ ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ರವಿವಾರ ಇಡೀ ನಗರ ಬಂದ್ ಆಗಿದ್ದು, ಸಾರ್ವಜನಿಕರು ಇಡೀ ದಿನ ರಸ್ತೆಗಿ ಳಿಯಲಿಲ್ಲ. ಆದರೆ ನಗರಸಭೆಯ ನೌಕರರು ಬೆಳ್ಳಂಬೆಳಗ್ಗೆ ರಸ್ತೆಗಳಿಗೆ ಇಳಿದು ಸ್ವಚ್ಛತಾ ಕೆಲಸಗಳಲ್ಲಿ ನಿರತರಾಗಿದ್ದರು. ಹೀಗೆ ರಸ್ತೆಯಲ್ಲಿ ಕಸ, ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದ್ದ ಪೌರಕಾರ್ಮಿಕರು ಕೊರೋನ ವೈರಸ್ ಸೋಂಕು ಹರಡುತ್ತಿರುವ ಸಂದರ್ಭದಲ್ಲೂ ಕೈಗಳಿಗೆ ಗ್ಲೌಸ್ ಹಾಗೂ ಮುಖಕ್ಕೆ ಮಾಸ್ಕ್‌ಗಳನ್ನಾಗಲಿ ತೊಡದೆ ತ್ಯಾಜ್ಯ ಸಂಗ್ರಹಣೆಯಲ್ಲಿ ನಿರತರಾಗಿದ್ದ ದೃಶ್ಯಗಳು ನಗರದ ವಿವಿಧೆಡೆ ಕಂಡು ಬಂದವು. ನಗರಸಭೆಯ ಅಧಿಕಾರಿಗಳು ಪೌರಕಾರ್ಮಿಕರಿಗೆ ಆರೋಗ್ಯ ಕಾಪಾಡಿಕೊಳ್ಳಲು ರಕ್ಷಣಾ ಪರಿಕರಗಳನ್ನು ನೀಡದೆ ಬರೀ ಕೈಗಳಲ್ಲಿ ಕೆಲಸ ಮಾಡಿಸುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ. ಇಡೀ ನಗರವನ್ನು ಸ್ವಚ್ಛವಾಗಿಡಬೇಕೆಂದು ಹೇಳಿಕೆ ನೀಡುತ್ತಾ ಪೌರಕಾರ್ಮಿಕರನ್ನು ದುಡಿಸಿಕೊಳ್ಳುವ ಅಧಿಕಾರಿಗಳು ಪೌರಕಾರ್ಮಿಕರ ಆರೋಗ್ಯ ಸಂರಕ್ಷಣೆಗೆ ಕಿಂಚಿತ್ ಕಾಳಜಿ ವಹಿಸದೆ ನಿರ್ಲಕ್ಷ್ಯ ವಹಿಸಿರುವುದರ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಸರಕಾರಗಳು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಶ್ರಮಿಸುತ್ತಿದೆ. ಜಿಲ್ಲಾಡಳಿತ, ನಗರಸಭೆ ಅಧಿಕಾರಿಗಳು, ಆರೋಗ್ಯ ಇಲಾಖೆ ವತಿಯಿಂದ ಕೊರೋನ ವೈರಸ್ ಜಾಗೃತಿಗೆ ಎಲ್ಲೆಡೆ ಭಿತ್ತಿ ಪತ್ರ, ಕರ ಪತ್ರ, ಫ್ಲೆಕ್ಸ್‌ಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಪೌರಕಾರ್ಮಿಕರ ಆರೋಗ್ಯ ರಕ್ಷಣೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಬರೀ ಕೈಗಳಿಂದ ಪೌರಕಾರ್ಮಿಕರು ನಗರದ ತ್ಯಾಜ್ಯ ವಸ್ತುಗಳನ್ನು ಸಂಗ್ರಹ ಮಾಡುವ ಸಂದರ್ಭ ಇಂತಹ ರೋಗ ಹರಡುವುದಿಲ್ಲವೇ ಎಂದು ಪ್ರಶ್ನಿಸಿರುವ ನಾಗರಿಕರು, ಇನ್ನಾದರೂ ಪೌರಕಾರ್ಮಿಕರ ಆರೋಗ್ಯ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ತ್ಯಾಜ್ಯ ಸಂಗ್ರಹ, ಸ್ವಚ್ಛತಾ ಕೆಲಸದ ವೇಳೆ ಕಡ್ಡಾಯವಾಗಿ ಗ್ಲೌಸ್, ಮುಖಗವುಸುಗಳನ್ನು ಧರಿಸಬೇಕೆಂದು ಆದೇಶ ನೀಡಲು ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಕೊರೋನ ವೈರಸ್ ಸೋಂಕಿನಿಂದಾಗಿ ಇಡೀ ದೇಶ ತಲ್ಲಣಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೋಗ ಭೀತಿ ಹೆಚ್ಚಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಂಕು ಇರುವವರು ಪತ್ತೆಯಾಗಿಲ್ಲವಾದರೂ ಸಾಂಕ್ರಾಮಿಕ ರೋಗಗಳು ಹೇಗೆ ಬರುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಸ್ವಚ್ಛತಾ ಕೆಲಸ ಮಾಡುವ ಪೌರಕಾರ್ಮಿಕ ಆರೋಗ್ಯ ರಕ್ಷಣೆಗೆ ನಿರ್ಲಕ್ಷ್ಯ ಮಾಡಿರುವುದು ಒಂದೆಡೆಯಾದರೆ ನಗರದ ವಿವಿಧೆಡೆ ಸಮರ್ಪಕವಾಗಿ ನೈರ್ಮಲ್ಯ ಕಾಪಾಡುವಲ್ಲಿ ನಗರಸಭೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ನಗರದ ಸಂತೆ ಮೈದಾನದ ಆವರಣದಲ್ಲಿ ಕಸ ತ್ಯಾಜ್ಯಗಳು ಕೆಲ ದಿನಗಳಿಂದ ರಾಶಿ ಬಿದ್ದಿದ್ದು, ವಾರ ಕಳೆದರೂ ಕಸ ವಿಲೇವಾರಿಯಾಗಿಲ್ಲ. ಇಂತಹ ಕಸದ ರಾಶಿಗಳಿಂದಾಗಿ ದುರ್ವಾಸನೆ ಹರಡುತ್ತಿದ್ದು, ಸಂತೆ ಮಾರುಕಟ್ಟೆ ಬಳಿಯ ಬಡಾವಣೆಗಳ ರಸ್ತೆಯಲ್ಲಿ ಮೂಗು ಮುಚ್ಚಿ ತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಕೆಲ ವಾರ್ಡ್ ಗಳ ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ಎಲ್ಲೆಂದರಲ್ಲಿ ಬಿದ್ದಿದ್ದರೂ ನಗರಸಭೆ ಅಧಿಕಾರಿಗಳು ಕೊರೋನ ರೋಗ ಹರಡುತ್ತಿರುವ ಭೀತಿಯ ಸಂದರ್ಭದಲ್ಲೂ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳು ಕೂಡಲೇ ನಗರದ ನೈರ್ಮಲ್ಯ ಕಾಪಾಡುವುದರೊಂದಿಗೆ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆಗೂ ಅಗತ್ಯ ಕ್ರಮಕೈಗೊಂಡು ಸಾಂಕ್ರಾಮಿಕ ರೋಗಗಳು ನಗರದಲ್ಲಿ ಹರಡದಂತೆ ಕ್ರಮವಹಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಆರೋಗ್ಯ ರಕ್ಷಣಾ ಪರಿಕರಗಳನ್ನು ಕಡ್ಡಾಯವಾಗಿ ನೀಡಬೇಕು

ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಪೌರಕಾರ್ಮಿಕರು ಈ ನಗರದ ಆಸ್ತಿಯಾಗಿದ್ದಾರೆ. ಅವರನ್ನು ನಾಗರಿಕರು ಗೌರವದಿಂದ ನೋಡಬೇಕು. ತಿಂದು ಎಸೆದ ತ್ಯಾಜ್ಯಗಳಿಂದ ಹಿಡಿದು ಮಲ-ಮೂತ್ರಗಳನ್ನೂ ಸ್ವಚ್ಛ ಮಾಡುವ ಕೆಲಸವನ್ನು ಅವರು ನಗರದಲ್ಲಿ ಅನೇಕ ವರ್ಷಗಳಿಂದ ಮಾಡುತ್ತಿದ್ದಾರೆ. ಈ ಮೂಲಕ ನಗರದ ಸ್ವಚ್ಛತೆ ಹಾಗೂ ನಾಗರಿಕರ, ಜನಪ್ರತನಿಧಿಗಳ, ಅಧಿಕಾರಿಗಳ ಆರೋಗ್ಯ ಕಾಪಾಡುತ್ತಿದ್ದಾರೆ. ಇಂತಹ ಸ್ವಚ್ಛತಾ ಕಾರ್ಮಿಕರಿಗೆ ಆರೋಗ್ಯ ರಕ್ಷಣಾ ಪರಿಕರಗಳನ್ನು ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿರುವ ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಅಧಿಕಾರಿಗಳು ಆರೋಗ್ಯ ರಕ್ಷಣಾ ಪರಿಕರಗಳನ್ನು ಕಡ್ಡಾಯವಾಗಿ ನೀಡಲೇಬೇಕು. ರಕ್ಷಣಾ ಪರಿಕರಗಳನ್ನು ಧರಿಸಿದೆ ಕೆಲಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರೆ ಬರೀ ಕೈಗಳಿಂದ ತ್ಯಾಜ್ಯ ಎತ್ತುವ ಅಮಾನವೀಯ ಕೆಲಸಕ್ಕೆ ಕಡಿವಾಣ ಹಾಕಬಹುದು ಎಂದು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News