×
Ad

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾ.24ರಿಂದ ಸೆಕ್ಷನ್ 144: ಜಿಲ್ಲಾಧಿಕಾರಿ ಡಾ.ಹರೀಶ್

Update: 2020-03-22 23:56 IST

ಕಾರವಾರ, ಮಾ.22: ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಅವರು ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು ಜಿಲ್ಲೆಯಲ್ಲಿ ಮಾ.24 ರಿಂದ ಸಿಆರ್‍ಪಿ ಸೆಕ್ಷನ್ 144 ಜಾರಿಗೊಳಿಸಿ ನಿಷೇದಾಜ್ಞೆ ಆದೇಶ ಹೊರಡಿಸಿದ್ದಾರೆ. 

ರಾಜ್ಯದಲ್ಲೂ ಕೋವಿಡ್-19 ವೈರಾಣುವಿನಿಂದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ನಾಗರಿಕರಿಗೆ ನಿಗದಿತ ಸಾಮಾಜಿಕ ಸಂತರ ಕಾಯ್ದುಕೊಳ್ಳಲು, ಗುಂಪು ಸೇರುವುದನ್ನು ತಡೆಗಟ್ಟಲು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ಈಗಾಗಲೇ ಸೂಚನೆ ನೀಡಲಾಗಿದೆ. ಆದರೂ ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಆಯಾ ತಹಶೀಲ್ದಾರರು, ಸಹಾಯಕ ಆಯುಕ್ತರು ಮತ್ತು ಪೊಲೀಸ್ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ವಿದೇಶದಿಂದ ಆಗಮಿಸುತ್ತಿರುವ ಸ್ಥಳೀಯ ನಿವಾಸಿಗಳ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ. ಸಾರ್ವಜನಿಕರು ಗುಂಪುಗಳಲ್ಲಿ ಓಡಾಡುವುದು, ಸಮೂಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸಹ ಕಂಡು ಬರುತ್ತಿದೆ. ಇದು ಹೀಗೆಯೇ ಮುಂದುವರೆದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಸಹ ಪರಿಸ್ಥಿತಿ ನಿಯಂತ್ರಣ ಮೀರುವ ಸಾಧ್ಯತೆ ಇದೆ. 

ಜಿಲ್ಲೆಯಲ್ಲಿ ಕೋವಿಡ್-19 ವೈರಾಣುವಿನ ಸೋಂಕು ಪಸರಿಸಲು ಪೂರಕವಾಗುವಂತೆ 5 ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಓಡಾಡುವುದು ಅಥವಾ ಇನ್ನಿತರೇ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ತಡೆಯಲು ದಂಡ ಪ್ರಕ್ರಿಯಾ ಸಂಹಿತೆ ಕಲಂ 144 ನಿಷೇದಾಜ್ಞೆ ಜಾರಿಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಮಾ.24ರಿಂದ ಬೆಳಗ್ಗೆ 6 ರಿಂದ ಮಾ.30ರ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಹೊರಡಿಸಿ ಆದೇಶ ನೀಡಲಾಗಿದೆ. 

ಆದೇಶವನ್ನು ಪೊಲೀಸ್ ಅಧೀಕ್ಷಕರು ಕಟ್ಟು ನಿಟ್ಟಾಗಿ ಜಾರಿಗೆ ತರುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಆದೇಶ ಅನುಷ್ಠಾನಕ್ಕೆ ಇತರೆ ಯಾವುದೇ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಸೇವೆ ಅಗತ್ಯವಿದ್ದಲ್ಲಿ ಅವರ ಸೇವೆಯನ್ನು ಪಡೆದುಕೊಳ್ಳಲು ಪೊಲೀಸ್ ಇಲಾಖೆಗೆ ಅನುಮತಿ ನೀಡಲಾಗಿದೆ. 

ತಾಲೂಕು ದಂಡಾಧಿಕಾರಿಗಳು ಮತ್ತು ಉಪವಿಭಾಗದ ದಂಡಾಧಿಕಾರಿಗಳು ಆದೇಶವನ್ನು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪೊಲೀಸ್ ಇಲಾಖೆಗೆ ಅಗತ್ಯ ಸಹಕಾರ ನೀಡಲು ಮತ್ತು ಯಾವುದೇ ರೀತಿಯ ಆದೇಶ ಉಲ್ಲಂಘನೆಯಾದರೆ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News