ಮೈಸೂರಿನಲ್ಲಿ ಮತ್ತೊಂದು ಕೊರೋನ ವೈರಸ್ ಸೋಂಕು ದೃಢ

Update: 2020-03-23 07:10 GMT

ಮೈಸೂರು, ಮಾ.23: ಮೈಸೂರಿನಲ್ಲಿ ಮತ್ತೊಂದು ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಎರಡಕ್ಕೆ ಏರಿದೆ.

ದುಬೈನಿಂದ ಆಗಮಿಸಿದ್ದ 46 ವರ್ಷದ ವ್ಯಕ್ತಿಗೆ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಸದ್ಯ ನಗರದ ಕೆ.ಆರ್.ಆಸ್ಪತ್ರೆಯ ಐಸೊಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಈತನ ರೂಟ್ ಮ್ಯಾಪ್ ಅನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಮಾಹಿತಿಯನ್ನು ಪಡೆಯುತಿದ್ದಾರೆ. ಈತನನ್ನು ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತಿದ್ದಾರೆ ಎಂದು ಹೇಳಿದ್ದಾರೆ.

ಕೊರೋನ ಪೀಡಿತ ವ್ಯಕ್ತಿ ದುಬೈನಿಂದ ಆಗಮಿಸಿದ್ದಾರೆ ಎಂದಷ್ಟೆ ಮಾಹಿತಿ ದೊರೆತಿದೆ. ಅವರು ಯಾತಕ್ಕಾಗಿ ಹೋಗಿದ್ದರು ಎಂಬುದು ತಿಳಿದು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಲಾಕ್ ಡೌನ್ ಇದ್ದರೂ ತರೆದ ಅಂಗಡಿ ಮುಂಗಟ್ಟುಗಳು:
ಮೈಸೂರು ಜಿಲ್ಲೆಯನ್ನು ಲಾಕ್ ಡೌನ್ ಎಂದು ಘೋಷಿಸಿದ್ದರೂ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಇದರಿಂದ ಆತಂಕಕ್ಕೊಳಗಾದ ಜಿಲ್ಲಾಡಳಿತ ಪೊಲೀಸರು ಮತ್ತು ನಗರಪಾಲಿಕೆ ಅಧಿಕಾರಿಗಳೊಟ್ಟಿಗೆ ಅಗತ್ಯ ಅಂಗಡಿಗಳನ್ನು ಬಿಟ್ಟು ಉಳಿದೆಲ್ಲಾ ಅಂಗಡಿಗಳನ್ನು ಮುಚ್ಚಿಸಿದರು. 
ಗರುಡ ವಾಹನದ ಮೈಕ್ ನಲ್ಲಿ ಅನೌನ್ಸ್ ಮಾಡಿ ಅಂಗಡಿಗಳನ್ನು ಮುಚ್ಚುವಂತೆ ಕರೆ ನೀಡಿದರು.

ನಾಳೆಯಿಂದ ಕ್ರಿಮಿನಲ್ ಪ್ರಕರಣ ದಾಖಲು:

ಸಾರ್ವಜನಿಕರಿಗೆ ಮನೆಯಲ್ಲೇ ಇರುವಂತೆ ಕರೆ ನೀಡಿದರೂ ಜನ ಸಹಕರಿಸುತ್ತಿಲ್ಲಾ ಜೊತೆಗೆ ಲಾಕ್ ಡೌನ್ ಆದೇಶವಿದ್ದರೂ ಅಂಗಡಿಗಳನ್ನು ತೆರೆಯಲಾಗಿದೆ. ಅಗತ್ಯವಿರುವ ಅಂಗಡಿಗಳನ್ನು ಬಿಟ್ಟರೆ ಇತರೆ ಅಂಗಡಿಗಳು ಬಾಗಿಲು ತೆಗೆದರೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
 
ಜನರು ಕೊರೋನ ಬಗ್ಗೆ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ, ದಯಮಾಡಿ ಎಲ್ಲರೂ ಮನೆಯಲ್ಲೆ ಇರುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News