ರಾಜ್ಯದ 9 ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ 'ಕರ್ಫ್ಯೂ ಮಾದರಿಯ ಲಾಕ್ ಡೌನ್'

Update: 2020-03-23 12:28 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ. 23: ಕೊರೋನ ಸೋಂಕು ಭೀತಿ ಹಿನ್ನೆಲೆಯಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಕರ್ಫ್ಯೂ ಮಾದರಿಯ ಲಾಕ್ ಡೌನ್ ವಿಧಿಸಲಾಗಿದೆ ಎಂದು ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಈ ಬಗ್ಗೆ ಆದೇಶ ಹೊರಡಿಸಿದ ಅವರು, ರಾಜ್ಯದ ಗಡಿಗಳು ಸಂಪೂರ್ಣ ಬಂದ್ ಆಗಲಿದ್ದು, ಕೆಎಸ್ಸಾರ್ಟಸಿ ಹಾಗೂ ಬಿಎಂಟಿಸಿ ಬಸ್ ಗಳ ಸೇವೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಲಾಕ್ ಡೌನ್ ಸಂದರ್ಭ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರಲಿದ್ದು, ಯಾವುದೇ ರೀತಿಯ ವಾಣಿಜ್ಯ ಸೇವೆಗಳು ಲಭ್ಯವಿರುವುದಿಲ್ಲ ಎಂದು ಹೇಳಿದ್ದಾರೆ. 

ದಕ್ಷಿಣ ಕನ್ನಡ, ಕಲಬುರಗಿ, ಚಿಕ್ಕಬಳ್ಳಾಪುರ, ಕೊಡಗು, ಧಾರವಾಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಬೆಳಗಾವಿ ಜಿಲ್ಲೆಗಳು ಸಂಪೂರ್ಣವಾಗಿ ಬಂದ್‌ ಆಗಲಿವೆ. ಈ ಜಿಲ್ಲೆಗಳಲ್ಲಿ ಸರಕಾರಿ ಕಚೇರಿಗಳು ಹಾಗೂ ಅಗತ್ಯ ವಸ್ತುಗಳು ಹೊರತುಪಡಿಸಿ ಎಲ್ಲವೂ ರದ್ದಾಗಲಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಎಲ್ಲಾ ಧರ್ಮಗಳ ಹಬ್ಬಗಳನ್ನು ನಿಷೇಧಿಸಲಾಗಿದ್ದು, ಅಂತರಾಜ್ಯ ಬಸ್ ಗಳ ಸೇವೆ ರದ್ದುಗೊಳಿಸಲಾಗಿದೆ. ಅಲ್ಲದೆ ರಾಜ್ಯದಲ್ಲಿ ಎಲ್ಲ ಎಸಿ ಬಸ್ಸುಗಳ ಸಂಚಾರವನ್ನು ಮಾ.31 ರವರೆಗೆ ಸ್ಥಗಿತಗೊಳಿಸಲಾಗಿದೆ. ಲಾಕ್‌ಡೌನ್ ಆಗಲಿರುವ ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ, ಔಷಧಿ, ದಿನಸಿ ಮೊದಲಾದ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಿರ್ಭಂದಿಸಲಾಗುವುದು. ಸಾರಿಗೆ, ರೆಸ್ಟೋರೆಂಟ್, ಮೆಟ್ರೋ ಸಂಚಾರ ಬಂದ್ ಆಗಲಿದ್ದು, ಆಸ್ಪತ್ರೆ, ಔಷಧಾಲಯ, ಹಾಲು, ಹೂ ಹಣ್ಣು, ಪೇಪರ್, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು.

ಲಾಕ್ ಡೌನ್ ಸಂದರ್ಭ ಯಾರಾದರೂ ಮನೆಯಿಂದ ಹೊರಬಂದರೆ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಡಾ.ಕೆ ಸುಧಾಕರ್ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News