ರಾಜ್ಯದಲ್ಲಿ ಏರುತ್ತಲೇ ಇದೆ ಕೊರೋನ: ಒಂದೇ ದಿನ ಏಳು ಮಂದಿಗೆ ಸೋಂಕು ದೃಢ

Update: 2020-03-23 14:58 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.22: ಕೊರೋನ ವೈರಸ್ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಮತ್ತಷ್ಟು ಅಧಿಕವಾಗುತ್ತಿದ್ದು, ಸೋಮವಾರ ಒಂದೇ ದಿನ 7 ಪ್ರಕರಣಗಳು ದೃಢಪಟ್ಟಿದ್ದು, ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು ಆತಂಕ ಹೆಚ್ಚಿಸಿದೆ. ಬೆಂಗಳೂರಿನಲ್ಲಿ 5 ಹಾಗೂ ಮೈಸೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೊರೋನ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಹಲವಾರು ಕಾರ್ಯಕ್ರಮಗಳು ಕೈಗೊಳ್ಳುತ್ತಿದ್ದರೂ, ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಮತ್ತಷ್ಟು ಭೀತಿಯನ್ನುಂಟು ಮಾಡಿದೆ.

ಬೆಂಗಳೂರಿನ ಮೂಲದ 38 ವರ್ಷದ ವ್ಯಕ್ತಿಯೊಬ್ಬರು ದುಬೈನಿಂದ ಮಾ.17 ರಂದು ಬೆಂಗಳೂರಿಗೆ ಬಂದಿದ್ದರು. ಮಾ.13 ರಂದು 41 ವರ್ಷದ ವ್ಯಕ್ತಿಯೊಬ್ಬರು ಲಂಡನ್ ಮೂಲಕ ಬೆಂಗಳೂರಿಗೆ ಬಂದಿದ್ದರು. ಮಾ.17 ರಂದು ಜರ್ಮನಿಯಿಂದ ಬೆಂಗಳೂರಿಗೆ ಬಂದಿದ್ದ 60 ವರ್ಷದ ವ್ಯಕ್ತಿಯೊಬ್ಬರು ಹಾಗೂ ಕೇರಳದ ಮೂಲದ 22 ವರ್ಷದ ಯುವಕ ದುಬೈನಿಂದ ಮಾ.22 ರಂದು ಬೆಂಗಳೂರಿಗೆ ಬಂದಿದ್ದರು. ಇವರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತ್ಯೇಕಿಸಿದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು, ಈ ಹಿಂದೆಯೇ ಕೊರೋನ ದೃಢಪಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಕ್ತಿಯೊಬ್ಬರ ಪತ್ನಿ, 30 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಅಲ್ಲದೆ, ಮತ್ತೊಬ್ಬ ಸೋಂಕು ದೃಢಪಟ್ಟ ವ್ಯಕ್ತಿಯ ಪತ್ನಿ 30 ವರ್ಷದ ಮಹಿಳೆಯೊಬ್ಬರಿಗೂ ಸೋಂಕು ಪತ್ತೆಯಾಗಿದ್ದು, ಅವರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೇರಳ ಮೂಲದ 46 ವರ್ಷದ ಪುರುಷರೊಬ್ಬರು ಮಾ.22 ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ಇವರಿಗೆ ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಗ್ಯ ಇಲಾಖೆ ಮನವಿ: ಕೇರಳ ಮೂಲದ 54 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಮವಾರ ಸೋಂಕು ದೃಢಪಟ್ಟಿದೆ. ಅವರು ಮಾ.10 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದು, ಅಲ್ಲಿಂದ ಕಾಸರಗೋಡುಗೆ ತೆರಳಿದ್ದಾರೆ. ಮಾ.11 ರಂದು ಮೀನು ಮಾರುಕಟ್ಟೆಗೆ ತೆರಳಿ ವಾಪಸ್ಸಾಗಿದ್ದಾರೆ. ಮಾ.18 ರಂದು ಕಾಸರಗೋಡುವಿನ ವೈದ್ಯರ ಬಳಿ ತಪಾಸಣೆ ಮಾಡಿಸಿದ್ದು, ಕೆಎಂಸಿ ಕ್ಯಾಂಟೀನ್‌ನಲ್ಲಿ ಚಹಾ ಸೇವಿಸಿದ್ದಾರೆ.

ಸಂಜೆ ಆಟೋ ಮೂಲಕ ಮೆಡಿಸಿಟಿ ಕಟ್ಟಡಕ್ಕೆ ತೆರಳಿ ಔಷಧಿ ಖರೀದಿಸಿ ಕೆಎಸ್ಸಾರ್ಟಿಸಿ ಬಸ್ ಮೂಲಕ ಕಾಸರಗೋಡು ತಲುಪಿದ್ದಾರೆ. ಮಾ.20 ರಂದು ಖಾಸಗಿ ಕಾರಿನಲಿ ಬಂದು ವೈದ್ಯರನ್ನು ಭೇಟಿ ಮಾಡಿದ್ದಾರೆ. ಹೀಗಾಗಿ, ಆ ಬಸ್ ಮತ್ತು ವಿಮಾನದಲ್ಲಿ ಪ್ರಯಾಣಿಸಿದವರು ಕೂಡಲೇ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ರಾಜ್ಯದಲ್ಲಿ ಇದುವರೆಗೂ 1,27,902 ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. ಮಾ.22 ಮತ್ತು 23 ರಂದು ಒಟ್ಟು 1,369 ಅಂತರ್‌ರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆ ಮಾಡಿದ್ದು, ಅದರಲ್ಲಿ 14 ಜನರನ್ನು ಐಸೋಲೇಟ್ ಹಾಗೂ 1,355 ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಇಂದು 441 ಜನರನ್ನು ಅವಲೋಕನೆಗಾಗಿ ಪಟ್ಟಿ ಮಾಡಲಾಗಿದ್ದು, 51 ಮಂದಿಯನ್ನು ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿಡಲಾಗಿದೆ. 96 ಜನರ ಪರೀಕ್ಷೆಗೆ ಮಾದರಿ ಸಂಗ್ರಹಿಸಿದ್ದು, 45 ನೆಗೆಟಿವ್ ಹಾಗೂ 7 ವರದಿಗಳು ಖಚಿತಗೊಂಡಿವೆ ಎಂದು ಇಲಾಖೆ ಹೇಳಿದೆ.

ಮಾ.12 ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಮಿರ್ ಮುಖ್ತಿಯಾರ್ ಅಲಿ ಸಂಗೀತ ಕಾರ್ಯಕ್ರಮಕ್ಕೆ ಕೊರೋನ ಸೋಂಕಿತ ವ್ಯಕ್ತಿಯೊಬ್ಬರು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ, ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಸ್ವಯಂಪ್ರೇರಿತವಾಗಿ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News