ದೇವಾಲಯ, ಪ್ರಾರ್ಥನಾಲಯಗಳಲ್ಲಿ ಗುಂಪು ಸೇರುವಂತಿಲ್ಲ: ಸಿಎಂ ಯಡಿಯೂರಪ್ಪ

Update: 2020-03-23 16:21 GMT

ಬೆಂಗಳೂರು, ಮಾ.23: ರಾಜ್ಯದ ಯಾವುದೇ ದೇವಾಲಯ ಅಥವಾ ಪ್ರಾರ್ಥನಾಲಯಗಳಲ್ಲಿ ಗುಂಪು ಸೇರುವಂತಿಲ್ಲ. ಬೆಂಗಳೂರು ಕರಗ ನಡೆಸಲೂ ಅನುಮತಿ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯುವ ಕುರಿತು ಖಾಸಗಿ ಆಸ್ಪತ್ರೆ ಆಡಳಿತಾಧಿಕಾರಿಗಳು ಮತ್ತು ವೈದ್ಯರೊಂದಿಗೆ ಸೋಮವಾರ ಸಭೆ ನಡೆಸಿದ ಅವರು, ಜೀವನೋಪಾಯಕ್ಕೆ ದೈನಂದಿನ ಆದಾಯದ ಮೇಲೆ ಅವಲಂಬಿತರಾಗಿರುವ ಜನರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಆಹಾರ ಒದಗಿಸಲಾಗುವುದು ಎಂದು ಹೇಳಿದರು.

ಕೋವಿಡ್ 19 ಅನ್ನು ತಡೆಗಟ್ಟಲು ಸರಕಾರದೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುವಂತೆ ಖಾಸಗಿ ಆಸ್ಪತ್ರೆಗಳು, ತಜ್ಞ ವೈದ್ಯರು ಹಾಗೂ ಪರಿಣತರಿಗೆ ಮನವಿ ಮಾಡಿದ್ದೇನೆ. ತಜ್ಞರು ನೀಡುತ್ತಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಸಭೆಯಲ್ಲಿ ಮುಖ್ಯಮಂತ್ರಿ ತಿಳಿಸಿದರು.

ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದ ದೊಡ್ಡ ಸಂಖ್ಯೆಯ ಜನರನ್ನು ಕ್ವಾರಂಟೈನ್‌ನಲ್ಲಿಡುವುದೇ ದೊಡ್ಡ ಸವಾಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ತಜ್ಞರು, ಸಂಪೂರ್ಣ ಶಟ್‌ಡೌನ್ ಮಾಡುವುದು ಉತ್ತಮ ಎಂದು ಸಲಹೆ ಮಾಡಿದ್ದಾರೆ ಎಂದು ಸಿಎಂ ಹೇಳಿದರು.

ರಾಜ್ಯದಲ್ಲಿ ಶೀಘ್ರ ಫೀವರ್ ಕ್ಲಿನಿಕ್‌ಗಳನ್ನು ಸ್ಥಾಪಿಸಿ, ಪ್ರಾಥಮಿಕ ಪರೀಕ್ಷೆ ನಡೆಸಬೇಕು ಎಂಬ ಸಲಹೆಯೂ ಬಂದಿದೆ. 30 ಫಿವರ್ ಕ್ಲಿನಿಕ್ ಸ್ಥಾಪನೆಯ ಭರವಸೆ ನೀಡಲಾಗಿದೆ. ಶೇ. 50 ರಷ್ಟು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆ, ನೂರಕ್ಕೂ ಅಧಿಕ ವೆಂಟಿಲೇಟರ್‌ಗಳು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1200 ಹಾಸಿಗೆಗಳ ಪ್ರತ್ಯೇಕ ಬ್ಲಾಕ್‌ನಂತೆಯೇ ಖಾಸಗಿ ಆಸ್ಪತ್ರೆಗಳು ಗುರುತಿಸಲು ಸಹಕರಿಸುವ ಭರವಸೆ ನೀಡಿದ್ದಾರೆ ಎಂದರು.

ಮನೆಯಲ್ಲಿಯೇ ನಮಾಝ್ ಮಾಡಿ

ಕೊರೋನ ವೈರಸ್ ಹರಡುವುದನ್ನು ತಪ್ಪಿಸಲು ಲಾಕ್‌ಡೌನ್ ಘೋಷಿಸಿರುವ 9 ಜಿಲ್ಲೆಗಳಲ್ಲಿರುವ ಮುಸ್ಲಿಮರು ಮನೆಯಲ್ಲೇ ನಮಾಝ್ ಮಾಡುವಂತೆ ಸರಕಾರ ಕೋರಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ, ಮಾ.31ರವರೆಗೆ ಈ ಜಿಲ್ಲೆಗಳ ಮುಸ್ಲಿಂ ಸಮುದಾಯದವರು ದಿನದ ಎಲ್ಲ ಪ್ರಾರ್ಥನೆ ಹಾಗೂ ಶುಕ್ರವಾರದ ವಿಶೇಷ ಪ್ರಾರ್ಥನೆಯನ್ನು ಮನೆಯಲ್ಲೇ ಮಾಡಬೇಕು ಎಂದು ವಿನಂತಿಸಿದ್ದಾರೆ.

ಮಸೀದಿಗೆ ಬಂದು ಪ್ರಾರ್ಥನೆ ಮಾಡಿದರೆ, ಕಿಕ್ಕಿರಿದು ಸೇರಿ ಪ್ರಾರ್ಥನೆ ಮಾಡುವಾಗ ಭುಜಕ್ಕೆ ಭುಜ ತಾಕುವಾಗ, ಕೈ ಕುಲುಕುವಾಗ, ಒಂದೆಡೆ ಹೆಚ್ಚಿನ ಜನ ಸೇರುವಾಗ ಕೊರೋನ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕುರಿತು ಮಸೀದಿ ಮುಖ್ಯಸ್ಥರು, ವಕ್ಫ್ ಬೋರ್ಡ್ ಅಧ್ಯಕ್ಷರು ಮತ್ತು ಸದಸ್ಯರ ಜತೆ ಸಮಾಲೋಚನೆ ನಡೆಸಿದಾಗ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಹೀಗಾಗಿ, ಎಲ್ಲರೂ ಮನೆಯಿಂದಲೇ ನಮಾಝ್ ಮಾಡುವಂತೆ ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News