ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾ.31ರವರೆಗೆ 144 ಸೆಕ್ಷನ್ ಜಾರಿ: ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್

Update: 2020-03-23 16:49 GMT

ಕಾರವಾರ: ಜಿಲ್ಲೆಯ ಭಟ್ಕಳ ತಾಲೂಕಿಗೆ ವಿದೇಶದಿಂದ ಬಂದಿರುವವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಾಳೆಯಿಂದ ಭಟ್ಕಳ ಉಪವಿಭಾಗದಲ್ಲಿ ಕಲಂ 144 ಜಾರಿ ಮಾಡಿ ಸಂಪರ್ಕವನ್ನು ಸಂಪೂರ್ಣ ಬಂದ್ ಮಾಡುವ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶ ಕುಮಾರ್ ಅವರು ಹೇಳಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಪಕ್ಕದ ಜಿಲ್ಲೆಗಳಲ್ಲಿ ಪ್ರಕರಣಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರವನ್ನು ಕೈಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಗೆ ಅಥವಾ ಭಟ್ಕಳಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಜನರು ಆತಂಕ ಪಡಬೇಕಾಗಿಲ್ಲ ಎಂದರು. 

ಭಟ್ಕಳ ಭಾಗದಲ್ಲಿ ಒಂದು ಪ್ರಕರಣ ಪಾಸಿಟಿವ್ ಬಂದಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಸತ್ಯಕ್ಕೆ ದೂರವಾದದ್ದು, ವಿದೇಶದಿಂದ ಬಂದ ಯುವಕ ಭಟ್ಕಳ ಊರಿನವನಾಗಿದ್ದು, ಆ ಯುವಕನನ್ನು ಭಟ್ಕಳಕ್ಕೆ ಬರುವ ಮೊದಲೇ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಯಾರೂ ಭಯಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು.

ಇದುವರೆಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಕ್ಕೆ ಹೋಗಿ ಬಂದವರಿದ್ದಾರೆ. ಆದ್ದರಿಂದ ಮುನ್ನೆಚ್ಚರಿಕಾ ದೃಷ್ಟಿಯಿಂದ ಪ್ರತಿನಿತ್ಯ ಎರಡು ಬಾರಿ ಅವರನ್ನ ತಪಾಸಣೆ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ವಿದೇಶದಿಂದ ಭಟ್ಕಳಕ್ಕೆ ಬಂದವರು ಶೇ.40ರಷ್ಟು ಇದ್ದಾರೆ. ಮಾ.24 ರಂದು ಬೆಳಗ್ಗೆಯಿಂದ ಮಾ.31ರವರೆಗೆ ಸಾರ್ವಜನಿಕರು ಇನ್ನಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಯಾರೂ ಕೂಡಾ 5 ಜನಕ್ಕಿಂತ ಹೆಚ್ಚು ಗುಂಪು ಗುಂಪಾಗಿ ಜನ ಸೇರುವಂತಿಲ್ಲ. ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ್ ವಿನಂತಿಸಿದರು.

ಜನತೆ ತಮ್ಮ ದಿನನಿತ್ಯದ ಸಂಚಾರ ಸೇವೆಗಳಿಗೆ ಸಾಧ್ಯವಾದ ಮಟ್ಟಿಗೆ ತಮ್ಮದೇ ಖಾಸಗಿ ವಾಹನ ಮತ್ತು ಇತರ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ತಮ್ಮನ್ನ ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ಇನ್ನೊಬ್ಬರನ್ನು ರಕ್ಷಿಸುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ಮುಂಜಾಗ್ರತೆ ವಹಿಸುವುದು ತುಂಬಾ ಮುಖ್ಯವಾಗಿರುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರೋಶನ್ ಮಾತನಾಡಿ, ಕೋವಿಡ್-19 ವೈರಾಣು ಚಿಕಿತ್ಸೆಗೆ ಜಿಲ್ಲಾಸ್ಪತ್ರೆ ಸಂಪೂರ್ಣ ಸಿದ್ಧವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಷ್ಟಾಚಾರದಂತೆ ಐಸೋಲೇಶನ್ ಸೆಂಟರ್ 500 ರಿಂದ 800 ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದ ಚಿಕಿತ್ಸೆಗೆ ಪ್ರತ್ಯೇಕವಾದ ವಾರ್ಡ್‍ಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ನಿಬೊಲೈಸೇಶನ್, ಪಲ್ಸ್ ಆಕ್ಸಿಮೀಟರ್, ವೆಂಟಿಲೇಟರ್ ಮಶೀನ್, ಐಸೋಲೇಶನ್ ತೀವ್ರ ನಿಗಾಘಟಕದಂತಹ ಎಲ್ಲಾ ರೀತಿಯ ವೈಧ್ಯಕೀಯ ವ್ಯವಸ್ಥೆಯನ್ನು ಜಿಲ್ಲಾಸ್ಪತ್ರೆಯಲ್ಲಿ ಮಾಡಲಾಗಿದ್ದು, ಯಾವುದೇ ರೀತಿಯ ಭಯ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

'ಜಿಲ್ಲೆಯಲ್ಲೂ ಕೂಡ ಸಾಮಾಜಿಕ ಜಾಲತಾಣಗಳಿಂದ ಜನತೆಯಲ್ಲಿ ಕೋವಿಡ್-19 ವೈರಾಣು ಕುರಿತು ಆತಂಕ ಮೂಡಿಸುವ ಗಾಳಿಸುದ್ಧಿ, ಸಂದೇಶಗಳು ಹರಿದಾಡುತ್ತಿದ್ದು, ಇಂತಹ ಸುಳ್ಳು ಸುದ್ದಿಗಳ ರವಾನೆಯನ್ನು ಜನರು ಸಾಧ್ಯವಾದಷ್ಟರ ಮಟಿಗೆ ನಿಲ್ಲಿಸಬೇಕು ಹಾಗೂ ಅಗತ್ಯವಿಲ್ಲದೆ ಬೀದಿಗಳಲ್ಲಿ ಗುಂಪು ಗುಂಪಾಗಿ ತಿರುಗಾಡಿದರೆ ಅಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೂಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News