ದಿನಗೂಲಿ ನೌಕರರಿಗೆ ಆಹಾರದ ಪೊಟ್ಟಣ ಒದಗಿಸಲು ಹೈಕೋರ್ಟ್ ಮೌಖಿಕ ಆದೇಶ

Update: 2020-03-23 17:12 GMT

ಬೆಂಗಳೂರು, ಮಾ.23: ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ದಿನಗೂಲಿ ನೌಕರರಿಗೆ ಆಹಾರದ ಪೊಟ್ಟಣಗಳನ್ನು ಒದಗಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಮೌಖಿಕ ಆದೇಶ ನೀಡಿದೆ.

ಅರ್ಜಿಯೊಂದರ ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರು, ಕೊರೋನ ವೈರಸ್‌ನಿಂದ ಪರಿಸ್ಥಿತಿ ಹದಗೆಟ್ಟಿದ್ದು, ದಿನಗೂಲಿ ನೌಕರರಿಗೆ ಕೆಲಸವಿಲ್ಲದಂತಾಗಿದೆ. ಹೀಗಾಗಿ, ಮಾನವೀಯತೆಯ ದೃಷ್ಟಿಯಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ತಯಾರಿಸುತ್ತಿರುವ ಆಹಾರದ ಪೊಟ್ಟಣಗಳನ್ನು ದಿನಗೂಲಿ ನೌಕರರಿಗೆ ಒದಗಿಸುವಂತೆ ರಾಜ್ಯ ಸರಕಾರಕ್ಕೆ ಮೌಖಿಕ ಆದೇಶ ನೀಡಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸರಕಾರಿ ಪರ ವಕೀಲರು, ದಿನಗೂಲಿ ನೌಕರರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ತಯಾರಿಸುವ ಆಹಾರದ ಪೊಟ್ಟಣಗಳನ್ನು ಒದಗಿಸುವಂತೆ ಮೌಖಿಕವಾಗಿ ಆದೇಶಿಸಿರುವ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ನ್ಯಾಯಮೂರ್ತಿ ಜಿ.ನರೇಂದರ್ ಅವರಿಗೆ ಭರವಸೆ ನೀಡಿದರು. ಸರಕಾರದ ಪರ ಹಾಜರಿದ್ದ ಮತ್ತೊಬ್ಬ ವಕೀಲರು, ದಿನಗೂಲಿ ನೌಕರರಿಗೆ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಮನವಿ ಮಾಡಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News