ಗ್ರಾಮ ಮಟ್ಟದಲ್ಲಿ ವಿಲೇಜ್ ಟಾಸ್ಕ್‌ ಫೋರ್ಸ್ ರಚನೆಗೆ ಆರೋಗ್ಯ ಇಲಾಖೆ ಆದೇಶ

Update: 2020-03-23 17:19 GMT

ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಚಿಕಿತ್ಸಾ ಘಟಕ ತೆರೆಯಿರಿ: ಡಿ.ಕೆ.ಶಿವಕುಮಾರ್ ಆಗ್ರಹ

ಬೆಂಗಳೂರು, ಮಾ.23: ಕೊರೋನ ಸೋಂಕು ಪ್ರಮಾಣ ಕ್ಷಿಪ್ರಗತಿಯಲ್ಲಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವೆಂಟಿಲೇಟರ್ ವ್ಯವಸ್ಥೆಯುಳ್ಳ ಪ್ರತ್ಯೇಕ ಚಿಕಿತ್ಸಾ ಘಟಕ ತೆರೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಸರಕಾರ ಈ ಸೋಂಕು ನಿವಾರಣೆಗೆ ಮತ್ತಷ್ಟು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ರೋಗ ಎದುರಿಸಲು ಸಮರ್ಪಕ ವ್ಯವಸ್ಥೆ ಇಲ್ಲ. ಗ್ರಾಮೀಣ ಭಾಗಗಳಿಗೆ ಹಬ್ಬಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಾತಿನಲ್ಲಿ ಹೇಳಿದರೆ ಸಾಲದು. ಕೂಡಲೇ ಕಾರ್ಯರೂಪಕ್ಕೆ ತರಬೇಕು ಎಂದು ತಿಳಿಸಿದ್ದಾರೆ.

ಕೊರೋನ ನಿಯಂತ್ರಣಕ್ಕೆ ಜಿಲ್ಲಾಡಳಿತವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಅವುಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೊರೋನ ಸೋಂಕು ಚಿಕಿತ್ಸೆಗೆ ಕನಿಷ್ಠ 60 ರಿಂದ 80 ಹಾಸಿಗೆ ಸಾಮರ್ಥ್ಯದ ವೆಂಟಿಲೇಟರ್ ಯುಕ್ತ ಪ್ರತ್ಯೇಕ ಚಿಕಿತ್ಸಾ ಘಟಕವನ್ನು ಸನ್ನದ್ಧ ಮಾಡಿಕೊಂಡಿರಬೇಕು. ಜತೆಗೆ ಕೊರೋನ ರೋಗ ಪತ್ತೆ ಮತ್ತು ನಿಗಾ ಕೇಂದ್ರಗಳನ್ನೂ ಎಲ್ಲ ಕಡೆ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳು, ವಿಶ್ವವಿದ್ಯಾಲಯ ಕ್ಯಾಂಪಸ್‌ಗಳು, ಹಾಸ್ಟೆಲ್ಗಳು ಸೇರಿದಂತೆ ಇತರೆ ಸಾಮೂಹಿಕ ವಸತಿ ಕೇಂದ್ರಗಳಲ್ಲಿ ರೋಗ ಪತ್ತೆ, ನಿಗಾ ಘಟಕಗಳನ್ನು ತೆರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಗ್ರಾಮೀಣ ಭಾಗದ ವೈದ್ಯರಿಗೆ ಮನವಿ: ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ವಿಶೇಷ ಮನವಿ ಮಾಡಿರುವ ಡಿ.ಕೆ.ಶಿವಕುಮಾರ್ ಸರಕಾರಿ ಮತ್ತು ಖಾಸಗಿ ವೈದ್ಯರು ತಮ್ಮ ಕಾರ್ಯ ನಿಯೋಜಿತ ಪ್ರದೇಶಗಳಲ್ಲೇ ಉಳಿದುಕೊಂಡು, ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.

ದೇಶದಲ್ಲಿ ಕೊರೋನ ಸೋಂಕು ಮೂರನೇ ಹಂತ ತಲುಪುತ್ತಿರುವ ಹೊತ್ತಲ್ಲಿ ಎಲ್ಲರೂ ಮುಂಜಾಗ್ರತೆ ವಹಿಸಬೇಕು. ನಗರ ಪ್ರದೇಶಗಳಿಂದ ಹಳ್ಳಿಗಳತ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದು ಗೊತ್ತಾಗಿದೆ. ಇದರಿಂದ ಸೋಂಕು ಗ್ರಾಮೀಣ ಭಾಗಗಳಿಗೂ ಪಸರಿಸುವ ಸಾಧ್ಯತೆಗಳಿವೆ. ಆ ಭಾಗದಲ್ಲಿ ಸೂಕ್ತ ಚಿಕಿತ್ಸೆ ಸಿಗುವುದು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News