ಮಾ.31ರವರೆಗೆ 8 ಲಕ್ಷ ವಾಣಿಜ್ಯ ವಾಹನಗಳ ಸಂಚಾರ ಸ್ಥಗಿತ

Update: 2020-03-23 17:30 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.23: ಕೊರೋನ ವೈರಸ್ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಮಾ.31ರ ವರೆಗೂ ಸರಕು ಸಾಗಣೆ ವಾಹನ ಸೇರಿದಂತೆ 8 ಲಕ್ಷ ವಾಣಿಜ್ಯ ವಾಹನಗಳ ಸಂಚಾರ ಸ್ಥಗಿತಗೊಳಿಸುವುದಾಗಿ ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ತಿಳಿಸಿದೆ.

ದೇಶದಲ್ಲಿ ಈ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ದೇಶದ ಹಲವು ರಾಜ್ಯಗಳು ತಮ್ಮ ಗಡಿ ಬಂದ್ ಮಾಡಿ ನೆರೆ ರಾಜ್ಯದ ಯಾವುದೇ ವಾಹನಗಳು ರಾಜ್ಯದೊಳಗೆ ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಕರ್ನಾಟಕ ಸರಕಾರವೂ ಸಹ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ. ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿಗಳಿಂದ ಪ್ರತಿ ನಿತ್ಯ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಸುಮಾರು 40 ಸಾವಿರ ಲಾರಿಗಳು ಸಂಚರಿಸುತ್ತವೆ. ಈ ಕೊರೋನ ವೈರಸ್‌ನಿಂದ ಪೂನಾ, ಮುಂಬೈ, ರಾಜಸ್ಥಾನ ಹೆದ್ದಾರಿಗಳು ಸಂಪೂರ್ಣ ಬಂದ್ ಆಗಿವೆ.

ಇದೀಗ ರಾಜ್ಯ ಹಾಗೂ ಹೊರರಾಜ್ಯದ ಗಡಿಭಾಗಗಳಲ್ಲಿ ಲಾರಿಗಳು ನಿಂತಿದ್ದು, ಚಾಲಕರು ಮತ್ತು ಕ್ಲೀನರ್‌ಗಳಿಗೆ ಮೂಲಸೌಕರ್ಯ ಕಲ್ಪಿಸುವುದು ಕಷ್ಟವಾಗಿದೆ. ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಚಾಲಕರು ಹಾಗೂ ಕ್ಲೀನರ್‌ಗಳ ಆರೋಗ್ಯದ ದೃಷ್ಟಿಯಿಂದ ರಾಜ್ಯದಿಂದ ಸಂಚರಿಸುವ 8 ಲಕ್ಷ ವಾಣಿಜ್ಯ ವಾಹನಗಳ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಈ ಪೈಕಿ ಡೀಸೆಲ್, ಪೆಟ್ರೋಲ್, ಹಾಲು, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಣೆ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಫೆಡರೇಶನ್‌ನ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News