ಗ್ರಾಮದಲ್ಲಿ ಓಡಾಡಿದ ಕೊರೋನ ಶಂಕಿತನ ಮೇಲೆ ಎಫ್‍ಐಆರ್

Update: 2020-03-24 16:26 GMT

ಬೀದರ್, ಮಾ.24: ಮನೆಯಲ್ಲಿರುವಂತೆ ಸೂಚಿಸಿದರೂ ಕೊರೋನ ವೈರಸ್ ಶಂಕಿತ ವ್ಯಕ್ತಿಯೊಬ್ಬ ಗ್ರಾಮದಲ್ಲಿ ತಿರುಗಾಡಿದ್ದಾನೆ. ಕೊರೋನ ವೈರಸ್ ತಡೆಗೆ ಮುಂಜಾಗೃತಾ ಕ್ರಮ ಪಾಲಿಸದ ಹಿನ್ನೆಲೆಯಲ್ಲಿ ಗೃಹ ಬಂಧನದಲ್ಲಿರುವ ವ್ಯಕ್ತಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದ ವ್ಯಕ್ತಿ ದುಬೈನಿಂದ ಆಗಮಿಸಿದ್ದರು. ಈ ವ್ಯಕ್ತಿಗೆ ಕೊರೋನ ವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಮುಂಜಾಗೃತಾ ಕ್ರಮಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ಗ್ರಾಮದಲ್ಲಿ ತಿರುಗಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಮನ್ನಾಎಕ್ಕೆಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಐಪಿಸಿ ಸೆಕ್ಷನ್ 269(ಜೀವಕ್ಕೆ ಅಪಾಯಕಾರಿಯಾದ ರೋಗವನ್ನು ನಿರ್ಲಕ್ಷ್ಯದಿಂದ ಹರಡುವುದು), 270(ಸೋಂಕು ಹರಡುವವರ ವಿರುದ್ಧ ಕೇಸ್) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಮಾ. 22 ರಂದು ದುಬೈನಿಂದ ಈ ವ್ಯಕ್ತಿ ಆಗಮಿಸಿದ್ದರು. ಬಳಿಕ ಪಿಎಸ್‍ಐ ಸುನಿತಾ ಹಾಗೂ ವೈದ್ಯಾಧಿಕಾರಿ ಚಂದ್ರಶೇಖರ್, ವ್ಯಕ್ತಿಯ ಮನೆಗೆ ಭೇಟಿ ನೀಡಿ, ಗೃಹ ಬಂಧನದಲ್ಲಿ ಇರಬೇಕು, ಗ್ರಾಮದಲ್ಲಿ ತಿರುಗಾಡಬಾರದು ಎಂದು ತಿಳಿ ಹೇಳಿದ್ದಾರೆ. ಅಲ್ಲದೆ ಕೊರೋನ ವೈರಸ್ ಹರಡದಂತೆ ಮುಂಜಾಗೃತಾ ಕ್ರಮಗಳ ಬಗ್ಗೆ ತಿಳಿ ಹೇಳಿದ್ದರು.

ಆದರೂ ಈ ವ್ಯಕ್ತಿ ಮನೆಯಲ್ಲಿ ಇರದೇ ಗ್ರಾಮದ ಬಸವೇಶ್ವರ ವೃತ್ತ ಸೇರಿದಂತೆ ವಿವಿಧೆಡೆ ತಿರುಗಾಡಿದ್ದಾನೆ. ಈ ವ್ಯಕ್ತಿ ವರ್ತನೆ ನೋಡಿ ಆತಂಕದಲ್ಲಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸದ್ಯ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News