ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆ

Update: 2020-03-24 16:42 GMT

ಬೆಂಗಳೂರು, ಮಾ.24: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಳವಾಗುತ್ತಿದ್ದು, ಮಂಗಳವಾರ 8 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಆ ಮೂಲಕ ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ಕೇರಳ ರಾಜ್ಯದ ಕಾಸರಗೋಡಿನ ನಿವಾಸಿಗಳಾಗಿರುವ 32 ವಯಸ್ಸಿನ ಪುರುಷ, 47 ವರ್ಷ ವಯಸ್ಸಿನ ಪುರುಷ ಹಾಗೂ 23 ವರ್ಷದ ಯುವಕ ದುಬೈ ಪ್ರವಾಸ ಮಾಡಿ ಹಾಗೂ 70 ವರ್ಷ ವಯಸ್ಸಿನ ಮಹಿಳೆ ಸೌದಿ ಅರೇಬಿಯಾದಿಂದ ಮಂಗಳೂರಿಗೆ ಆಗಮಿಸಿದ್ದರು. ಎಲ್ಲರನ್ನೂ ನೇರವಾಗಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ ಮತ್ತು ಅವರನ್ನು ವಿಮಾನ ನಿಲ್ದಾಣದಿಂದಲೇ ಮಂಗಳೂರಿನಲ್ಲಿರುವ ನಿಯೋಜಿತ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ನಿವಾಸಿಗಳಾದ 40 ವರ್ಷದ ಪುರುಷ ಹಾಗೂ 65 ವರ್ಷದ ಪುರುಷ ದುಬೈ ಪ್ರವಾಸದಿಂದ ಆಗಮಿಸಿದ್ದು, ಈ ಇಬ್ಬರನ್ನೂ ಉತ್ತರ ಕನ್ನಡ ಜಿಲ್ಲೆಯ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ಕುಟುಂಬದವರೇ ಆದ 56 ವರ್ಷದ ವಯಸ್ಸಿನ ಮಹಿಳೆ ಹಾಗೂ ಬೆಂಗಳೂರಿನ ನಿವಾಸಿ 56 ವರ್ಷದ ವಯಸ್ಸಿನ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಇಬ್ಬರನ್ನೂ ನಿಯೋಜಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್ 19 ಸೋಂಕಿತರ ಎಲ್ಲ ನೇರ ಸಂಪರ್ಕ ಮತ್ತು ದ್ವಿತೀಯ ಹಂತದ ಸಂಪರ್ಕವನ್ನು ಹೊಂದಿರುವಾಗ ಎಡಗೈಯ ಹಿಂಬದಿಯಲ್ಲಿ ಅಳಿಸಲಾಗದ ಶಾಹಿಯಿಂದ ಹಸ್ತ ಮುದ್ರೆ ಹಾಕಲು ಸೂಚಿಸಲಾಗಿದೆ. ಕೊರೋನ ಹತೋಟಿಯಲ್ಲಿ ಇರುವ ಕ್ವಾರಂಟೈನ್ ನೋಟಿಸನ್ನು ಎಲ್ಲರ ಮನೆ ಬಾಗಿಲಿಗೆ ಅಂಟಿಸಲು ಆದೇಶಿಸಲಾಗಿದೆ. ಪ್ರಮುಖ ಇಲಾಖೆಗಳ ಗ್ರೂಪ್-ಬಿ, ಸಿ, ಡಿ ನೌಕರರಿಗೆ ಕಚೇರಿಗೆ ವಿನಾಯಿತಿ ನೀಡಲಾಗಿದೆ. ಈವರೆಗೂ ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ ಮೂರು ಜನರನ್ನು ಬಂಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News