ಕೊರೋನ ನಿಯಂತ್ರಣಕ್ಕೆ 1 ಸಾವಿರ ವೆಂಟಿಲೇಟರ್ ಗಳ ಖರೀದಿ: ಡಿಸಿಎಂ ಡಾ.ಅಶ್ವಥ್ ನಾರಾಯಣ

Update: 2020-03-24 16:49 GMT

ಬೆಂಗಳೂರು, ಮಾ.24: ರಾಜ್ಯದಲ್ಲಿ ಕೊರೋನ ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಒಂದು ಸಾವಿರ ವೆಂಟಿಲೇಟರ್ ಗಳ ಖರೀದಿಗೆ ಅನುಮೋದನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.

ಮಂಗಳವಾರ ವಿಧಾನಪರಿಷತ್‍ನಲ್ಲಿ ನಿಯಮ 68 ಅಡಿಯಲ್ಲಿ ರಾಜ್ಯಾದ್ಯಂತ ಕೋವಿಡ್-19 ಖಾಯಿಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿರೋಧ ಪಕ್ಷದ ನಾಯಕ ಸೇರಿದಂತೆ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 300 ಸರಕಾರಿ ಹಾಗೂ 100 ಖಾಸಗಿ ವೆಂಟಿಲೇಟರ್ ಗಳ ಸೌಲಭ್ಯವಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಇದುವರೆಗೂ ಕೊರೋನ ಸೋಂಕು ದೃಢಪಟ್ಟ ವ್ಯಕ್ತಿಗಳಲ್ಲಿ ಯಾರಿಗೂ ವೆಂಟಿಲೇಟರ್ ಬಳಕೆ ಮಾಡಿಲ್ಲ. ಹೀಗಾಗಿ, ಸರಕಾರ ಮುಂಜಾಗ್ರತಾ ಕ್ರಮವಾಗಿ 1 ಸಾವಿರ ವೆಂಟಿಲೇಟರ್ ಗಳನ್ನು ಖರೀದಿ ಮಾಡಲು ಈಗಾಗಲೇ ಅನುಮೋದನೆ ನೀಡಲಾಗಿದೆ. ಅಲ್ಲದೆ, ಇನ್ಪೋಸಿಸ್ 100 ವೆಂಟಿಲೇಟರ್ ಖರೀದಿಸಿ ನೀಡುವುದಾಗಿ ಹೇಳಿದೆ. ಉಳಿದಂತೆ ಜಿಲ್ಲಾ ಮಟ್ಟದಲ್ಲಿ ಖಾಸಗಿ ಆಸ್ಪತ್ರೆಗಳಿಂದ ಸೌಲಭ್ಯಗಳನ್ನು ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ 15 ಲಕ್ಷ ಮಾಸ್ಕ್ ಗಳನ್ನು ತಯಾರಿಸಲು ಈಗಾಗಲೇ ಒಂದು ಸಂಸ್ಥೆಗೆ ಜವಾಬ್ದಾರಿ ನೀಡಿದ್ದೇವೆ. ಉಳಿದಂತೆ, 10 ಲಕ್ಷ ಪಿಪಿಪಿಗಳ ತಯಾರಿಕೆಗೆ ಅನುಮತಿ ನೀಡಲಾಗಿದೆ. ಎನ್ 95 ಮಾಸ್ಕ್ ಗಳ ತಯಾರಿಕೆಗೂ ಹೇಳಲಾಗಿದೆ. ಜನರಿಗೆ ಸ್ಥಳೀಯವಾಗಿ ಜಾಗೃತಿ ವಹಿಸಲು ಅಲ್ಲಲ್ಲಿ ತಾತ್ಕಾಲಿಕ ಟೆಂಟ್‍ಗಳನ್ನು ಹಾಕಲಾಗಿದ್ದು, ಅಲ್ಲಿಯೇ ಫಿವರ್ ಚೆಕ್ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಮಟ್ಟದಲ್ಲಿ ಐಸೋಲೇಷನ್ ಘಟಕ ಮಾಡಲಾಗಿದೆ. ಈಗಾಗಲೇ 9 ಜಿಲ್ಲೆಗಳಲ್ಲಿ ಇದ್ದು, ಅದನ್ನು ರಾಜ್ಯದ ಎಲ್ಲ ಕಡೆಗಳಿಗೂ ವಿಸ್ತರಣೆ ಮಾಡಲಾಗಿದೆ ಎಂದ ಅವರು, ತಾಲೂಕು ಮಟ್ಟದಲ್ಲಿಯೂ ಫಿವರ್ ಸ್ಕ್ರೀನಿಂಗ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಮಾಡಿದ್ದು, ಜಿಲ್ಲಾಧಿಕಾರಿಗಳಿಗೆ ಅದರ ನಿಯಂತ್ರಣಕ್ಕೆ ವಹಿಸಲಾಗಿದೆ ಎಂದು ವಿವರಿಸಿದರು.

ಕೊರೋನ ಸೋಂಕು ಪತ್ತೆಯಾದಂತಹ ಕುಟುಂಬದವರ ಮನೆಗಳ ಮೇಲೆ ನೋಟಿಸ್ ಅಂಟಿಸಲಾಗುತ್ತದೆ. ಅದರಲ್ಲಿ ಐಸೋಲೇಷನ್, ಕ್ವಾರಂಟೈನ್‍ನಲ್ಲಿರಬೇಕಾ ಎಂಬುದನ್ನು ತಿಳಿಸಲಾಗಿರುತ್ತದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News