2020-21ನೇ ಸಾಲಿನ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಂದೂಡಲು ಶಿಕ್ಷಣ ಇಲಾಖೆ ಸುತ್ತೋಲೆ

Update: 2020-03-24 16:53 GMT
ಸಾಂದರ್ಭಿಕ ಚಿತ್ರ

ಬೆಂಗಳೂರು. ಮಾ.24: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳು 2020-21ನೇ ಸಾಲಿನ ದಾಖಲಾತಿಯನ್ನು ಸರಕಾರದ ಮುಂದಿನ ಆದೇಶದವರೆಗೆ ಮುಂದೂಡಬೇಕೆಂದು ಶಿಕ್ಷಣ ಇಲಾಖೆ ಸುತ್ತೊಲೆ ಹೊರಡಿಸಿದೆ.

ಕೆಲವು ಖಾಸಗಿ ಶಾಲೆಗಳು 2020-21ರ ದಾಖಲಾತಿಯನ್ನು ಮಾ.31ರೊಳಗೆ ಶುಲ್ಕ ಪಾವತಿಸಿ ಮಾಡಿಕೊಳ್ಳಬೇಕೆಂದು ಪೋಷಕರಿಗೆ ಒತ್ತಾಯಿಸುತ್ತಿರುವ ಬಗ್ಗೆ ಪೋಷಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಯಾವುದೇ ಕಾರಣಕ್ಕೂ ದಾಖಲಾತಿ ಪ್ರಕ್ರಿಯೆಯನ್ನು ಕೈಗೊಳ್ಳುವಂತಿಲ್ಲವೆಂದು ಆದೇಶಿಸಿದೆ.

ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ, ತಮ್ಮ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಯಾವುದೇ ಕಾರ್ಯನಿಮಿತ್ತ ಶಾಲೆಗೆ ಭೇಟಿ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಈ ಬಗ್ಗೆ ಪೋಷಕರಿಗೆ ದೂರವಾಣಿ ಮೂಲಕ ಇಲ್ಲವೆ ಇಮೇಲ್ ಮೂಲಕ ತಿಳಿಸುವುದು ಕಡ್ಡಾಯವಾಗಿದೆ.

ಶಿಕ್ಷಣ ಇಲಾಖೆಯ ಎಲ್ಲ ಉಪ ನಿರ್ದೇಶಕರು ಈ ಬಗ್ಗೆ ನಿಗಾ ವಹಿಸಿ, ಯಾವುದೇ ಶಾಲೆಗಳು ಕಾನೂನು ಉಲ್ಲಂಘಿಸಿ ದಾಖಲಾತಿ ಪ್ರಕ್ರಿಯೆಗೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News