"ಹೀಗಾದರೆ ನಾವು ಬದುಕುವುದು ಹೇಗೆ ?"

Update: 2020-03-24 17:18 GMT
ಸಾಂದರ್ಭಿಕ ಚಿತ್ರ

ಬೆಳಗಾವಿ, ಮಾ.24: ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯು ಬೀದಿ ಬದಿ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ನಮ್ಮ ಬದುಕು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಬೀದಿ ಬದಿ ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಬಹಳ ವರ್ಷಗಳಿಂದ ಬೆಳಗಾವಿ ನಗರದ ಬೀದಿ ಬದಿಯಲ್ಲಿಯೇ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ, ಕೊರೋನ ವೈರಸ್ ಭೀತಿಯಿಂದಾಗಿ ಬೆಳಗಾವಿ ಮಹಾನಗರ ಪಾಲಿಕೆಯು ಜನರ ಆರೋಗ್ಯದ ದೃಷ್ಟಿಯಿಂದ ಬೀದಿ ಬದಿ ವ್ಯಾಪಾರವನ್ನು ಕೆಲವು ದಿನಗಳ ಮಟ್ಟಿಗೆ ಬಂದ್ ಮಾಡಿ ಎಂದು ಹೇಳಿದ್ದಾರೆ. ಇದು ಇನ್ನು ಎಷ್ಟು ದಿನಗಳವರೆಗೆ ಮುಂದುವರೆಯುತ್ತದೆ ಎಂಬುದು ನಮಗೆ ತಿಳಿದಿಲ್ಲ. ಈ ಸಮಸ್ಯೆ ಬೇಗ ಬಗೆಹರಿದರೆ ನಮ್ಮ ವ್ಯಾಪಾರವನ್ನು ಮತ್ತೆ ಮುಂದುವರಿಸಬಹುದು. ಇಲ್ಲವಾದರೆ ನಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ವಾರ ಪಾಲಿಕೆಯ ಸಿಬ್ಬಂದಿಗಳು ಖುದ್ದಾಗಿ ಬಂದು ಅಂಗಡಿಗಳನ್ನು ಬಂದ್ ಮಾಡಿಸಿ ಹೋದರು. ನಾವೂ ಒಪ್ಪಿ ಸುಮ್ಮನಾದೆವು. ಕೊರೋನ ವೈರಸ್ ನಿಯಂತ್ರಿಸಲು ಇದು ಅನಿವಾರ್ಯ ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಒಂದೆರಡು ದಿನಗಳಾದರೆ ಪರವಾಗಿಲ್ಲ ನಾವು ಸಂಬಾಳಿಸುತ್ತೇವೆ. ಆದರೆ 20 ರಿಂದ 30 ದಿನಗಳವರೆಗೆ ಅಂಗಡಿ ಬಂದ್ ಮಾಡಿದರೆ ನಾವು ಹೇಗೆ ಬದುಕುವುದು ಎಂದು ಚಹಾ ವ್ಯಾಪಾರಿ ದೇವರಾಜ್ ಹೇಳಿದರು.

ನಮಗೆ ಇದೊಂದೇ ಬದುಕಿಗೆ ಆಸರೆ. ಆದರೆ, ಇದನ್ನೇ ಬಂದ್ ಮಾಡಿಬಿಟ್ಟರೆ ನಾವು ಹೇಗಿರಬೇಕು. ಇಷ್ಟು ದಿನಗಳವರೆಗೆ ಆಗಿರುವ ನಷ್ಟವನ್ನು ಸರಕಾರ ಭರಿಸಿಕೊಡಲು ಮುಂದಾಗಬೇಕು ಎಂದು ಕೋರಿದರು.

ಆಯುಕ್ತರ ಹೇಳಿಕೆ: ಬೀದಿ ಬದಿ ತೆರೆದ ವಾತಾವರಣದಲ್ಲಿ ತಿಂಡಿ ತಿನಿಸು ಸಿದ್ಧಪಡಿಸುತ್ತಿದ್ದ ಡಬ್ಬಾ ಅಂಗಡಿಗಳನ್ನು ಬಂದ್ ಮಾಡಿದ್ದೇವೆ. ದೊಡ್ಡ ಹೊಟೇಲ್, ರೆಸ್ಟೋರೆಂಟ್‍ಗಳನ್ನು ಬಂದ್ ಮಾಡಿಲ್ಲ. ಅಲ್ಲಿಂದ ಜನರು ಊಟವನ್ನು ಪಾರ್ಸೆಲ್ ತೆಗೆದುಕೊಂಡು ಹೋಗಬಹುದು ಎಂದು ಮಹಾನಗರ ಪಾಲಿಕೆಯ ಆಯುಕ್ತ ಕೆ.ಎಚ್.ಜಗದೀಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News