ಮಾ.10ರ ಬಳಿಕ ವಿದೇಶದಿಂದ ಮರಳಿದ ಕರ್ನಾಟದ ನಿವಾಸಿಗಳ ಪಟ್ಟಿಯನ್ನು ಪ್ರಕಟಿಸಿದ ರಾಜ್ಯ ಸರಕಾರ

Update: 2020-03-25 16:35 GMT

ಬೆಂಗಳೂರು, ಮಾ.25:  ಮುಖ್ಯ ಮಂತ್ರಿ  ಬಿಎಸ್ ಯಡಿಯೂರಪ್ಪ  ನೇತೃತ್ವದ ಕರ್ನಾಟಕ  ಸರ್ಕಾರವು ಮಾರ್ಚ್ 10 ರಿಂದ ವಿದೇಶದಿಂದ ಮರಳಿದ ಸಾವಿರಾರು ಕರ್ನಾಟಕದ ನಿವಾಸಿಗಳ ಸಂಪರ್ಕ ವಿವರಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆಬ್ ಸೈಟ್ ನಲ್ಲಿ  ಪ್ರಕಟಿಸಿದೆ. ವಿದೇಶದಿಂದ ಮರಳಿದ  ವ್ಯಕ್ತಿಯ ಖಾಯಂ  ವಿಳಾಸದ ವಿವರಗಳನ್ನು ಹೊಂದಿರುವ ಪ್ರತಿ ಜಿಲ್ಲೆಯ ಪಟ್ಟಿಯು ಈಗ ಗೌಪ್ಯತೆ ಕಾಳಜಿಯನ್ನು ಹುಟ್ಟುಹಾಕಿದೆ.

ಕೆಲವರು ಈ ಕ್ರಮವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಇದನ್ನು ಟೀಕಿಸಿದ್ದಾರೆ.ಈ ಪಟ್ಟಿಯಲ್ಲಿ 2020 ರ ಮಾರ್ಚ್ 10 ರಂದು ಅಥವಾ ನಂತರ ವಿದೇಶದಿಂದ ಕರ್ನಾಟಕಕ್ಕೆ ಆಗಮಿಸಿದವರ ಹೆಸರು  ವಿಳಾಸಗಳ ವಿವರ ಇದೆ.

ವಿವರಗಳು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿವೆ.  ಇದರಲ್ಲಿ  ಆಗಮನದ ದಿನಾಂಕ, ಕ್ವಾರೆಂಟೈನ್ ಕೊನೆಯ ದಿನಾಂಕ, ನಿರ್ಗಮನದ ಸ್ಥಳ, ಆಗಮನದ ಸ್ಥಳ ಮತ್ತು ಮನೆಯ ಸಂಖ್ಯೆ ಸೇರಿದಂತೆ ವ್ಯಕ್ತಿಯ ವಿಳಾಸದೊಂದಿಗೆ ಜಿಲ್ಲಾವಾರು ಪಟ್ಟಿಯನ್ನು ಹೊಂದಿದೆ. ವೆಬ್‌ಸೈಟ್ ನಲ್ಲಿ  14,000 ಕ್ಕೂ ಹೆಚ್ಚು ಬೆಂಗಳೂರಿನ ನಿವಾಸಿಗಳ ವಿವರ ಇದೆ.

ಸಮಾಜದಲ್ಲಿ ಅವರು ಎದುರಿಸುತ್ತಿರುವ ತಾರತಮ್ಯ ಮತ್ತು ಬಹಿಷ್ಕಾರದ ಬಗ್ಗೆ ದೇಶದ ವಿವಿಧ ಭಾಗಗಳಿಂದ ಆರೋಗ್ಯ ಸಿಬ್ಬಂದಿ ಮತ್ತು ವಿಮಾನಯಾನ ಸಿಬ್ಬಂದಿಗಳ ದೂರುಗಳ ಮಧ್ಯೆ  ಸರ್ಕಾರದ ಈ ಕ್ರಮವು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಆದಾಗ್ಯೂ, ವ್ಯಕ್ತಿಯ ಗೌಪ್ಯತೆಯನ್ನು ಗೌರವಿಸುವುದಕ್ಕಿಂತ ರಾಜ್ಯದಲ್ಲಿ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವುದು  ಮುಖ್ಯ ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ. ಇದನ್ನು ಸಮಾಜದ ಹಿತದೃಷ್ಟಿಯಿಂದ  ಪ್ರಕಟಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವಥ್  ನಾರಾಯಣ್   ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಕೇಂದ್ರ ನೋಡಲ್ ಅಧಿಕಾರಿ ಸುಬೋಧ್ ಯಾದವ್ ಮಂಗಳವಾರ ಮತ್ತು ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ಅವರು ಈ ಪಟ್ಟಿಯನ್ನು  ಬುಧವಾರ ಟ್ವಿಟರ್‌ನಲ್ಲಿ  ಪಟ್ಟಿಯನ್ನು ಅಪ್‌ಲೋಡ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News