ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆ

Update: 2020-03-26 16:23 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.26: ರಾಜ್ಯದಲ್ಲಿ ಗುರುವಾರ ಮತ್ತೆ 4 ಕೋವಿಡ್-19 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ಪ್ರಮುಖವಾಗಿ ಮೈಸೂರಿನ 35 ವರ್ಷದ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿ ಯಾವುದೇ ಹೊರಗಿನ ಪ್ರದೇಶಕ್ಕೆ ತೆರಳಿಲ್ಲ. ಜತೆಗೆ ಕೊರೋನ ಸೋಂಕಿತ ವ್ಯಕ್ತಿಗಳ ಜೊತೆ ಸಂಪರ್ಕಕ್ಕೆ ಬಂದಿಲ್ಲ. ಆದರೆ ನಂಜನಗೂಡಿನಲ್ಲಿರುವ ಔಷಧ ಉತ್ಪಾದನಾ ಕೈಗಾರಿಕೆಯ ಗುಣ ನಿಯಂತ್ರಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಂದರ್ಭದಲ್ಲಿ ಅನೇಕ ವೈದ್ಯಕೀಯ ತಂತ್ರಜ್ಞರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವೈದ್ಯರು ತನಿಖೆ ನಡೆಸುತ್ತಿದ್ದು, ಈತ ಸಂಪರ್ಕಿಸಿದ್ದ 7 ಮಂದಿಯನ್ನು ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿಡಲಾಗಿದೆ.

ಆಂಧ್ರಪ್ರದೇಶ ರಾಜ್ಯದ ಅನಂತಪುರದ 64 ವಯಸ್ಸಿನ ವ್ಯಕ್ತಿಯೊಬ್ಬರು ಫ್ರಾನ್ಸ್ ದೇಶಕ್ಕೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದು, ಮಾ.1 ರಂದು ಭಾರತಕ್ಕೆ ವಾಪಸ್ಸಾಗಿದ್ದರು. ನಂತರ ಅವರು ಹಿಮಾಚಲ ಪ್ರದೇಶ, ಪುಟಪರ್ತಿ ಮೂಲಕ ಮಾ.21 ರಂದು ಬೆಂಗಳೂರಿಗೆ ಬಂದಿದ್ದಾರೆ. ಈ ಪ್ರಕರಣವನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿ ಆಗಿರುವ 45 ವಯಸ್ಸಿನ ವ್ಯಕ್ತಿಯೊಬ್ಬರು, ಸೋಂಕಿತನ ಸಂಪರ್ಕ ಹೊಂದಿದ್ದರು. ಸದ್ಯ ಇವರನ್ನು ಪ್ರತ್ಯೇಕ ಕೊಠಡಿಯಲ್ಲಿಡಲಾಗಿದ್ದು, ಬೆಂಗಳೂರು ಜಿಲ್ಲೆಯ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News