ಕೊರೋನ ಬಗ್ಗೆ ರಾಹುಲ್ ಎಚ್ಚರಿಕೆಯನ್ನು ಕಡೆಗಣಿಸಿದ್ದ ಕೇಂದ್ರ ಸರಕಾರ: ಸಿದ್ದರಾಮಯ್ಯ ಆರೋಪ

Update: 2020-03-26 17:48 GMT

ಬೆಂಗಳೂರು, ಮಾ.26: ರಾಜ್ಯದಲ್ಲಿ ಕೊರೋನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಯಮ್ಯ ರಾಜ್ಯ ಸರಕಾರಕ್ಕೆ ತುರ್ತು ಕೈಗೊಳ್ಳಬೇಕಾದ 20 ಕ್ರಮಗಳ ಕುರಿತು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಸಿದ್ದರಾಮಯ್ಯ ತಿಳಿಸಿರುವ ಮುನ್ಸೂಚನೆಗಳಲ್ಲಿ ಪ್ರಮುಖವಾಗಿ, 'ಕೇಂದ್ರ ಸರಕಾರ ವಿಳಂಬವಾಗಿಯಾದರೂ ಕೂಲಿ ಕಾರ್ಮಿಕರು, ರೈತರ ನೆರವಿಗೆ ಸ್ಪಂದಿಸಿರುವುದು ಸ್ವಾಗತಾರ್ಹ. ಕೊರೋನ ಕುರಿತು ಜ.30ರಂದೇ ರಾಹುಲ್ ಗಾಂಧೀ ಎಚ್ಚರಿಸಿದ್ದರೂ, ಕೇಂದ್ರ ಸರಕಾರ ಎಚ್ಚೆತ್ತುಕೊಂಡಿಲ್ಲ. ಅದರ ಪರಿಣಾಮ ಇಂದು ಈಗಿನ ಗಂಭೀರ ಸ್ಥಿತಿಗೆ ಕಾರಣ ಎಂದು ಹೇಳಿದ್ದಾರೆ.

ಸರಕಾರದಿಂದ ಪ್ರಕಟಿಸಿರುವ ಯೋಜನೆಗಳು ಕೂಡಲೇ ಜಾರಿಗೆ ತರಲು ರಾಜ್ಯ ಸರಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಸಣ್ಣ ವ್ಯಾಪಾರಿಗಳು, ಆಟೋ ಮತ್ತು ಟ್ಯಾಕ್ಸಿ ಚಾಲಕರು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಅವರಿಗೆ ಉದ್ಯೋಗವಿಲ್ಲ. ಅವರ ಸಾಲವನ್ನು ಭಾಗಶಃ ಮನ್ನಾ ಮಾಡಿ ಕನಿಷ್ಠ ಮೂರು ತಿಂಗಳ ಇಎಂಐ ಪಾವತಿ ಮುಂದೂಡಬೇಕಿದೆ. ಅಸಂಘಟಿತ ವಲಯದಲ್ಲಿರುವ ಕಾರ್ಮಿಕರ ಬದುಕು ಕಷ್ಟದಲ್ಲಿದೆ. ಕಾರ್ಮಿಕ ಇಲಾಖೆ ತುರ್ತು ಗಮನ ನೀಡಬೇಕು.

ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು ಮತ್ತು ಸಿಬ್ಬಂದಿ ಹಾಗೂ ಬಂದ್ ಆಗಿರುವ ಹೊಟೇಲ್, ಮಾಲ್, ಚಿತ್ರಮಂದಿರಗಳ ಸಿಬ್ಬಂದಿ, ಡೆಲಿವರಿ ಬಾಯ್‍ಗಳು ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದು, ಗಾರ್ಮೆಂಟ್ ಫ್ಯಾಕ್ಟರಿ ಸೇರಿದಂತೆ ಸಣ್ಣ ಕೈಗರಿಕೆಗಳು ಮುಚ್ಚುವ ಇವರೆಲ್ಲರ ಉದ್ಯೋಗದಾತರು ಸಂಬಳ ಸಹಿತ ರಜೆ ನೀಡಬೇಕು.

ಮಹಿಳೆಯರ ಜನಧನ್ ಖಾತೆಗೆ 500 ರೂ.ಗಳು ನೀಡುವಂತೆಯೇ ಪುರುಷರಿಗೂ ಈ ಸೌಲಭ್ಯವನ್ನು ವಿಸ್ತರಿಸಬೇಕು. ಕಿಸಾನ್ ಸಮ್ಮಾನ್ ಯೋಜನೆಯನ್ನು ವಿಸ್ತರಿಸಬೇಕು. ಆಹಾರ ಮತ್ತಿತರ ಅವಶ್ಯಕ ಸಾಮಗ್ರಿಗಳ ಮೇಲಿನ ಜಿಎಸ್‍ಟಿಯನ್ನು ಮುಂದಿನ ಮೂರು ತಿಂಗಳುಗಳ ಕಾಲ ಕನಿಷ್ಠ ಶೇ.5ರಷ್ಟು ಕಡಿತಗೊಳಿಸಬೇಕು. ಊರಿಗೆ ಹೋಗದೇ ಅನಿವಾರ್ಯವಾಗಿ ಬೆಂಗಳೂರಿನಲ್ಲಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ಉಳಿದುಕೊಂಡಿರುವವರಿಗಾಗಿ ಆಶ್ರಯ ತಾಣ ಮಾಡಬೇಕು ಹಾಗೂ ಊಟ-ತಿಂಡಿ ವ್ಯವಸ್ಥೆ ಮಾಡಬೇಕು.

ರಾಜ್ಯದಲ್ಲಿ 2-3 ಜಿಲ್ಲೆಗಳಿಗೊಂದರಂತೆ, ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಕೊರೋನ ವೈರಸ್ ಪರೀಕ್ಷಾ ಲ್ಯಾಬ್‍ಗಳನ್ನು ಆರಂಭೀಸಬೇಕು. ಎಲ್ಲ ಜಿಲ್ಲೆಗಳಲ್ಲಿ ಕಫದ ಮಾದರಿ ಸಂಗ್ರಹ ಕೇಂದ್ರಗಳನ್ನು ತೆರೆಯಬೇಕು. ಐಸೋಲೇಷನ್ ಕೇಂದ್ರಗಳು ಮತ್ತು ಕೃತಕ ಉಸಿರಾಟದ ವ್ಯವಸ್ಥೆಯನ್ನು ಹೆಚ್ಚಳ ಮಾಡಬೇಕು.

ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಬೇಕಿದೆ. ಕೊರೋನ ಚಿಕಿತ್ಸೆಗೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರ ಚಿಕಿತ್ಸಾ ವೆಚ್ಚ ಸರಕಾರವೇ ಭರಿಸಬೇಕು. ಎಲ್ಲೆಡೆ ಕಂಟ್ರೋಲ್ ರೂಂ ತೆರೆಯಬೇಕು. ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನೀಡುವ ಪೌಷ್ಠಿಕ ಆಹಾರ ನೀಡುವ ಕುರಿತು ತೀರ್ಮಾನ ಕೈಗೊಳ್ಳಿ ಸೇರಿದಂತೆ ಹಲವು ಸೂಚನೆಗಳನ್ನು ಹಾಗೂ ಆಗ್ರಹಗಳನ್ನು ಸರಕಾರದ ಮುಂದಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News