ತುಮಕೂರು ಜಿಲ್ಲೆಯಲ್ಲಿ ಹೈ ಅಲರ್ಟ್: ಜಿಲ್ಲಾಧಿಕಾರಿ ರಾಕೇಶ್ ಕುಮಾರ್

Update: 2020-03-27 07:29 GMT

ತುಮಕೂರು, ಮಾ.27: ಕೊರೋನ ಸೋಂಕಿನಿಂದ ಜಿಲ್ಲೆಯಲ್ಲಿ ಶಿರಾ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಈಚೆಗೆ ಬರಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಸೂಚಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಜಿಲ್ಲಾಧಿಕಾರಿ, ಸೋಂಕಿಗೆ ಇಂದು ಬಲಿಯಾದ ವ್ಯಕ್ತಿ ಮಾ.7ರಂದು ದಿಲ್ಲಿಯ ಜಾಮಿಯಾ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂಪರ್ಕ ಕ್ರಾಂತಿ ರೈಲಿನಲ್ಲಿ 13 ಮಂದಿಯೊಂದಿಗೆ ಪ್ರಯಾಣ ಮಾಡಿದ್ದರು. ದಿಲ್ಲಿಯಿಂದ ಮಾ.14ರಂದು ಬೆಂಗಳೂರಿಗೆ ಬಂದಿದ್ದು, ಅಲ್ಲಿಂದ ಬಸ್ ಮೂಲಕ ಶಿರಾಗೆ ತಲುಪಿದ್ದರು ಎಂದು ಮಾಹಿತಿ ನೀಡಿದರು.

ದಿಲ್ಲಿಯಿಂದ ಬಂದಿದ್ದ ಈ ವ್ಯಕ್ತಿಗೆ ಮಾ.18ರಂದು ಜ್ವರ ಬಂದಿದ್ದು, ಮಾ.21ರಂದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮಾ.24ರಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕೊರೋನ ಸೋಂಕಿನ ಬಗ್ಗೆ ಬೆಂಗಳೂರಿನಿಂದ ಇಂದು ವರದಿ ಬಂದಿದ್ದು, ಬೆಳಗ್ಗೆ 10:45ಕ್ಕೆ ವ್ಯಕ್ತಿಯೂ ಜಿಲ್ಲಾಸ್ಪತ್ರೆಯ ಐಸೋಲೆಟೇಡ್ ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಮೃತ ವ್ಯಕ್ತಿಯೊಂದಿಗೆ ದಿಲ್ಲಿಗೆ ತೆರಳಿದ್ದ 13 ಮಂದಿ ಹಾಗೂ ಕುಟುಂಬದ ಸದಸ್ಯರನ್ನು ಐಸೋಲೇಟೆಡ್ ಮಾಡಲಾಗಿದ್ದು, ಮೃತ ವ್ಯಕ್ತಿಯ ಕುಟುಂಬದ ಎಂಟು ಮಂದಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಹಾಗೂ ಉಳಿದ 16 ಮಂದಿಗೆ ಶಿರಾ ಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹಾಗೂ ಚಿಕಿತ್ಸಕರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News