ರಾಜ್ಯ ಸರಕಾರ ಆದೇಶಿಸಿದ್ದು 100 ವೆಂಟಿಲೇಟರ್ ಗಳಿಗೆ ಹೊರತು ಸಾವಿರ ವೆಂಟಿಲೇಟರ್ ಗಳಿಗಲ್ಲ !
ಬೆಂಗಳೂರು, ಮಾ.27: ಕೊರೋನ ಸೋಂಕು ನಿಯಂತ್ರಣಕ್ಕಾಗಿ ಒಂದು ಸಾವಿರ ವೆಂಟಿಲೇಟರ್ ನೀಡಬೇಕು ಎಂದು ರಾಜ್ಯ ಸರಕಾರವು ಮೈಸೂರಿನ ಸ್ಕ್ಯಾನ್‍ರೇ ಟೆಕ್ನಾಲಜಿ ಕಂಪೆನಿಗೆ ಆದೇಶಿಸಿದೆ ಎಂದು ಹೇಳಿದ್ದ ರಾಜ್ಯ ಸರಕಾರ, ಈವರೆಗೆ ಕೇವಲ 100 ವೆಂಟಿಲೇಟರ್ ಗಳಿಗೆ ಅಷ್ಟೇ ಆದೇಶ ನೀಡಿರುವುದು ತಿಳಿದುಬಂದಿದೆ. ಅದೂ ದೃಢೀಕೃತ ಆದೇಶವಲ್ಲ ಎಂದು ಕಂಪೆನಿ ಹೇಳಿದೆ.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸರಕಾರದ ಅಧಿಕಾರಿಗಳು ಮಾ.23 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಕೂಡಲೇ ಒಂದು ಸಾವಿರ ವೆಂಟಿಲೇಟರ್ ಗಳನ್ನು ನೀಡುವಂತೆ ತಿಳಿಸಿತ್ತಾದರೂ, 100 ವೆಂಟಿಲೇಟರ್ ಪೂರೈಸುವಂತೆ ನಮಗೆ ಆದೇಶ ತಲುಪಿದೆ ಎಂದು ಕಂಪೆನಿಯ ಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ವಿಶ್ವಪ್ರಸಾದ್ ಆಳ್ವ ಹೇಳಿದ್ದಾರೆ.
ಡಿಸಿಎಂ ಹಾಗೂ ಆರೋಗ್ಯ ಸಚಿವ ಸೂಚನೆ ನೀಡಿದ್ದಾರೆ. ಅದು ಕೇವಲ ಪತ್ರಗಳ ಮೂಲಕ ಹೇಳಿದ್ದು, ಯಾವುದೇ ಮುಂಗಡ ಹಣವನ್ನೂ ನೀಡಿಲ್ಲ. ಹೀಗಾಗಿ, ಈಗ ಬಂದಿರುವ ಆದೇಶವನ್ನು ದೃಢೀಕೃತ ಆದೇಶ ಎಂದು ಪರಿಗಣಿಸಲು ಆಗುವುದಿಲ್ಲ. ನಾವು ರಾಜ್ಯ ಸರಕಾರಕ್ಕೆ ವೆಂಟಿಲೇಟರ್ ತಯಾರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿಗೆ ಮುಗಿದ ಉಭಯ ಸದನಗಳಲ್ಲಿ ಸಚಿವರು ವೆಂಟಿಲೇಟರ್ ಪೂರೈಸುವಂತೆ ಸ್ಕ್ಯಾನ್‍ರೇ ಕಂಪೆನಿಗೆ ಆದೇಶ ನೀಡಲಾಗಿದೆ ಎಂದು ಅಶ್ವಥ್ ನಾರಾಯಣ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದರು. ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಹಾಗೂ ಹೊರರಾಜ್ಯಗಳಿಂದ 30 ಸಾವಿರಕ್ಕೂ ಅಧಿಕ ವೆಂಟಿಲೇಟರ್ ಗಳಿಗೆ ಬೇಡಿಕೆ ಬಂದಿತ್ತು. ಆದರೆ, ಯಾವುದೇ ವಸ್ತುಗಳ ರಫ್ತು ಮಾಡುವುದನ್ನು ಕೇಂದ್ರ ಸರಕಾರ ನಿರ್ಬಂಧಿಸಿದೆ. ಹೀಗಾಗಿ, ಎಲ್ಲವೂ ಸ್ತಬ್ಧಗೊಂಡಿವೆ ಎಂದರು.
ಮೈಸೂರು ಮತ್ತು ಇಟಲಿಯ ಬೊಲಾಗ್ನಾದಲ್ಲಿರುವ ಕಂಪೆನಿಯ ಘಟಕಗಳು ದೇಶ ಮತ್ತು ವಿದೇಶಗಳಿಂದ ಬಂದಿರುವ ವೆಂಟಿಲೇಟರ್ ಗಳ ತುರ್ತು ಬೇಡಿಕೆ ಪೂರೈಸಲು ದಿನದ 24 ಗಂಟೆಗೂ ಕಾರ್ಯನಿರ್ವಹಿಸುತ್ತಿದ್ದು, ಸಾಮರ್ಥ್ಯಕ್ಕಿಂತ 25 ಪಟ್ಟು ಹೆಚ್ಚು ಕೆಲಸ ಮಾಡುತ್ತಿದೆ.
ಸದ್ಯ ಇಡೀ ದೇಶದಲ್ಲಿ ಒಂದು ಲಕ್ಷ ವೆಂಟಿಲೇಟರ್ ಲಭ್ಯವಿದ್ದು, ಇನ್ನೂ ಒಂದು ಲಕ್ಷ ವೆಂಟಿಲೇಟರ್ ಗೆ ಕೇಂದ್ರದಿಂದ ಬೇಡಿಕೆ ಬಂದಿದೆ. ಸಹಭಾಗಿ ಕಂಪೆನಿಗಳ ನೆರವಿನಿಂದ ಈ ಗುರಿ ಈಡೇರಿಸುವ ವಿಶ್ವಾಸವಿದೆ. ಕೋವಿಡ್ 19 ನಿಯಂತ್ರಣ ಕಾರ್ಯಪಡೆಯಲ್ಲಿರುವ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವಗುಪ್ತಾ ವಿವಿಧ ಹೊಣೆಗಾರಿಕೆ ವಹಿಸಿರುವ ಐಎಎಸ್ ಅಧಿಕಾರಿಗಳಾದ ಗುಂಜನ್ ಕೃಷ್ಣ, ಮಣಿವಣ್ಣನ್ ನಿರಂತರ ಸಂಪರ್ಕದಲ್ಲಿದ್ದಾರೆ. ಮೈಸೂರಿನ ಘಟಕದಲ್ಲಿ ಮೊದಲ ಹಂತದಲ್ಲಿ ವೆಂಟಿಲೇಟರ್ ಗಳು 10 ದಿನಗಳ ಒಳಗೆ ಸಿದ್ಧವಾಗಲಿದೆ. ಕೆಲವೇ ವಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್ ಉತ್ಪಾದನೆ ಆರಂಭವಾಗಲಿದೆ ವಿಶ್ವಪ್ರಸಾದ್ ಆಳ್ವ ಎಂದರು.
ವೆಂಟಿಲೇಟರ್ ಗೆ 5 ಲಕ್ಷದಿಂದ 12 ಲಕ್ಷದವರೆಗೆ ಬೆಲೆ ಇದೆ. ಆದರೆ, ಉತ್ಪಾದನಾ ಪ್ರಮಾಣ ಅಧಿಕವಾಗುತ್ತಿದ್ದಂತೆಯೇ ಬೆಲೆಯೂ ಕಡಿಮೆಯಾಗುತ್ತದೆ. 50 ಸಾವಿರ ವೆಂಟಿಲೇಟರ್ ಒಂದೇ ಸಲ ಉತ್ಪಾದನೆಯಾದರೆ ಬೆಲೆ ಕನಿಷ್ಠ ಮಟ್ಟಕ್ಕಿಳಿಯುತ್ತದೆ. ಸದ್ಯ ನಮ್ಮಲ್ಲಿ ಸ್ವಯಂಚಾಲಿತ ವೆಂಟಿಲೇಟರ್ ಉತ್ಪಾದಿಸುತ್ತಿದ್ದೇವೆ. ಸೆಮಿ ವೆಂಟಿಲೇಟರ್ ಬೆಲೆ ಇನ್ನೂ ಕಡಿಮೆಯಾಗುತ್ತದೆ ಎಂದು ವಿಶ್ವಪ್ರಸಾದ್ ಆಳ್ವ ಅಭಿಪ್ರಾಯಪಟ್ಟಿದ್ದಾರೆ.
ಸ್ಕ್ಯಾನ್‍ರೇ ಕಂಪೆನಿಗೆ ತಿಂಗಳಿಗೆ ಐದು ಸಾವಿರ ವೆಂಟಿಲೇಟರ್ ಉತ್ಪಾದನಾ ಸಾಮರ್ಥ್ಯವಿದೆ. ದೃಢೀಕೃತ ಆದೇಶ ವಿಳಂಬವಾದರೆ ಬೇಡಿಕೆಯನ್ನು ಕೂಡಲೇ ಪೂರೈಸುವುದು ಕಷ್ಟವಾಗುತ್ತದೆ.
-ವಿಶ್ವಪ್ರಸಾದ್ ಆಳ್ವ, ಆಡಳಿತ ನಿರ್ದೇಶಕ, ಸ್ಕ್ಯಾನ್‍ರೇ ಕಂಪನಿ