ಕೊರೋನ ನಿಯಂತ್ರಣಕ್ಕಾಗಿ ಕಾಂಗ್ರೆಸ್ ಶಾಸಕರಿಂದ ತಲಾ ಒಂದು ಲಕ್ಷ ರೂ. ದೇಣಿಗೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ

Update: 2020-03-27 14:45 GMT

ಬೆಂಗಳೂರು, ಮಾ.27: ಕೊರೋನ ಮಹಾಮಾರಿ ಸೋಂಕು ನಿಯಂತ್ರಣಕ್ಕಾಗಿ ಕಾಂಗ್ರೆಸ್ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ತಲಾ ಕನಿಷ್ಠ ಒಂದು ಲಕ್ಷ ರೂ. ದೇಣಿಗೆಯನ್ನು ನೀಡಲು ನಿರ್ಧರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ನಾಯಕರು, ಕಾರ್ಯಕರ್ತರು ಬೇಕಾದರೆ ಸ್ವಯಂ ಇಚ್ಛೆಯಿಂದ ದೇಣಿಗೆ ನೀಡಬಹುದು. ಎಲ್ಲ ಶಾಸಕರು ನಮ್ಮ ಶಾಸಕಾಂಗ ಪಕ್ಷದ ನಾಯಕರ ಮೂಲಕ ತಮ್ಮ ದೇಣಿಗೆಯನ್ನು ನೀಡಲಿದ್ದಾರೆ ಎಂದರು.

ನಮ್ಮ ಪಕ್ಷ, ಆರೆಸೆಸ್ಸ್ ಹಾಗೂ ಬಿಜೆಪಿ ರೀತಿಯಲ್ಲಿ ಒತ್ತಡ ಹಾಕಿ ಕಾರ್ಯಕರ್ತರಿಂದ ದೇಣಿಗೆ ಸಂಗ್ರಹಿಸಲು ಮುಂದಾಗುವುದಿಲ್ಲ. ಈ ರೀತಿ ಹಣ ಹಾಗು ದವಸ ಧಾನ್ಯ ಸಂಗ್ರಹಿಸಲು ನಮ್ಮ ಪಕ್ಷ ಪ್ರೋತ್ಸಾಹ ನೀಡುವುದಿಲ್ಲ. ಇನ್ನು ಕಾರ್ಯಕರ್ತರು, ಅಭಿಮಾನಿಗಳು ದೇಣಿಗೆ ನೀಡುವುದಾದರೆ ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಮೂಲಕ ಹಣವನ್ನು ತಲುಪಿಸಬಹುದು ಎಂದು ಶಿವಕುಮಾರ್ ಹೇಳಿದರು.

ಸಂಗ್ರಹವಾದ ದೇಣಿಗೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ವಿಚಾರವಾಗಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿರುವ ರಮೇಶ್ ಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಅವರನ್ನೊಳಗೊಂಡ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಈ ಸಮಿತಿಯು ಪರಿಸ್ಥಿತಿ ಅಧ್ಯಯನ ನಡೆಸಿ ದೇಣಿಗೆಯನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಲಿದೆ ಎಂದು ಅವರು ಹೇಳಿದರು.

ಜೊತೆಗೆ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ಕಾರ್ಯಕ್ರಮಗಳು ಹೇಗಿವೆ. ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ, ಜನರಿಗೆ ಸರಕಾರದಿಂದ ಏನು ಸಿಗಬೇಕಿದೆ ಎಂಬ ಅಂಶಗಳ ಬಗ್ಗೆ ಈ ಸಮಿತಿ ಪರಿಶೀಲಿಸಲಿದೆ. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಇರುವ ವೈದ್ಯರನ್ನು ಈ ಟಾಸ್ಕ್ ಫೋರ್ಸ್ ಒಳಗೊಂಡಿರುತ್ತದೆ ಎಂದು ಶಿವಕುಮಾರ್ ತಿಳಿಸಿದರು.

ಟಾಸ್ಕ್ ಫೋರ್ಸ್: ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್(ಅಧ್ಯಕ್ಷ), ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್(ಸಂಚಾಲಕ), ಮಾಜಿ ಸಚಿವರಾದ ಶಿವಾನಂದ ಪಾಟೀಲ್, ಯು.ಟಿ.ಖಾದರ್, ಮಾಜಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕರಾದ ಡಾ.ಅಜಯ್‍ ಸಿಂಗ್, ಎಂ.ನಾರಾಯಣಸ್ವಾಮಿ, ಡಾ.ಯತೀಂದ್ರ, ಡಾ.ರಂಗನಾಥ್, ಪ್ರಿಯಾಂಕ್ ಖರ್ಗೆ, ಸೌಮ್ಯಾ ರೆಡ್ಡಿ, ಡಾ.ಅಂಜಲಿ ನಿಂಬಾಳ್ಕರ್, ಕೆಪಿಸಿಸಿ ಸಂಶೋಧನಾ ವಿಭಾಗದ ಮುಖ್ಯಸ್ಥ ಮನ್ಸೂರ್ ಅಲಿ ಖಾನ್, ನಯನ ಜವಾರ್, ಕವಿತಾ ರೆಡ್ಡಿ, ಭಾರತಿ ಶಂಕರ್ ಹಾಗೂ ಡಾ.ರಾಘವೇಂದ್ರ ಸದಸ್ಯರಾಗಿರುತ್ತಾರೆ ಎಂದು ಅವರು ಪ್ರಕಟಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಶಾಸಕ ಡಾ.ಅಜಯ್‍ ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರಕಾರಕ್ಕೆ ಸಂಪೂರ್ಣ ಬೆಂಬಲ

ಕೊರೋನ ಸೋಂಕು ನಿಯಂತ್ರಣ ವಿಚಾರವಾಗಿ ಸೋನಿಯಾಗಾಂಧಿ, ರಾಹುಲ್‍ ಗಾಂಧಿ ಹಾಗೂ ಇತರೆ ನಾಯಕರು ರಾಷ್ಟ್ರಮಟ್ಟದಲ್ಲಿ ಸರಕಾರಕ್ಕೆ ಸಹಕಾರ ನೀಡುತ್ತಿದ್ದಾರೆ. ರಾಜ್ಯದಲ್ಲಿ ನಾವೆಲ್ಲರೂ ಸರಕಾರದ ಜೊತೆ ನಿಂತುಕೊಳ್ಳಲು ನಿರ್ಧರಿಸಿದ್ದೇವೆ. ನಮ್ಮಲ್ಲಿ ಯಾವುದೆ ಭಿನ್ನಾಭಿಪ್ರಾಯವಿಲ್ಲ. ಸರಕಾರ ತೆಗೆದುಕೊಂಡಿರುವ ಅನೇಕ ಕಾರ್ಯಕ್ರಮ, ಘೋಷಣೆಗಳಿಗೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News