ಕೊರೋನ ಸೋಂಕಿದ್ದರೂ ವೈದ್ಯರು ನಿರ್ಲಕ್ಷಿಸುತ್ತಿದ್ದಾರೆ, ನನ್ನನ್ನು ಕಾಪಾಡಿ: ಸಿಎಂ ಬಿಎಸ್‌ವೈಗೆ ಯೋಧನ ಮನವಿ
ಬೆಳಗಾವಿ, ಮಾ.27: ನನಗೆ ಕೊರೋನ ವೈರಸ್ ಸೋಂಕಿದೆ, ಕಾಪಾಡಿ ಎಂದು ಜಿಲ್ಲೆಯ ಯೋಧರೊಬ್ಬರು ವಿಡಿಯೋ ಮೂಲಕ ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಯೋಧ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದವರಾಗಿದ್ದು, ಮಾ.17ರಂದು ಹೈದರಾಬಾದ್‍ನಿಂದ ಗ್ರಾಮಕ್ಕೆ ಬಂದಿದ್ದಾರೆ. ಆದರೆ ತನಗೆ ಕೊರೋನ ವೈರಸ್ ಸೋಂಕು ತಗುಲಿದ್ದು, ವೈದ್ಯಾಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಕೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?: 'ನನಗೆ ಕೊರೋನ ವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಈಗ ನನ್ನ ತಾಯಿಯಲ್ಲೂ ಕೊರೋನ ವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಹುಬ್ಬಳ್ಳಿಯ ಕಿಮ್ಸ್ ವೈದ್ಯರು ನನಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ವಿದೇಶದಿಂದ ಬಂದವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ನಿನಗೆ ಏನು ಆಗಿಲ್ಲ ಹೋಗು ಎಂದು ಹೇಳುತ್ತಿದ್ದಾರೆ. ದಯವಿಟ್ಟು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಕಾಪಾಡಿ. ಸೂಕ್ತ ಚಿಕಿತ್ಸೆ ದೊರೆಯುವಂತೆ ಕ್ರಮಕೈಗೊಳ್ಳಿ' ಎಂದು ಯೋಧ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.