ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆ

Update: 2020-03-27 15:46 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.27: ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಅಧಿಕವಾಗುತ್ತಿದ್ದು, ಗುರುವಾರ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 3 ಮರಣ ಹಾಗೂ 5 ಜನ ಬಿಡುಗಡೆ ಹೊಂದಿದ್ದಾರೆ.

ರಾಜ್ಯದಲ್ಲಿ ಇದುವರೆಗೂ ಕೊರೋನ ಸೋಂಕಿತ 56 ಜನರನ್ನು ಗೊತ್ತುಪಡಿಸಿದ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವು ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 10 ತಿಂಗಳ ಗಂಡು ಮಗುವಿಗೆ ಸೋಂಕು ದೃಢಪಟ್ಟಿದೆ. ಇವರು ಕೊರೋನ ಪ್ರಭಾವಿತ ದೇಶಕ್ಕೆ ಪ್ರಯಾಣಿಸಿದ ಹಿನ್ನೆಲೆಯಿಲ್ಲ. ಪ್ರಕರಣವನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ. ವಿಸ್ತೃತ ಮಾಹಿತಿ ಕಲೆಹಾಕುತ್ತಿದ್ದು, ತಪಾಸಣೆ ಪ್ರಗತಿಯಲ್ಲಿದೆ.

ಕೊಲಂಬೋ ದೇಶಕ್ಕೆ ಪ್ರಯಾಣ ಬೆಳೆಸಿ ಮಾ.15 ರಂದು 20 ವರ್ಷದ ಮಹಿಳೆ ಬೆಂಗಳೂರಿಗೆ ಹಿಂದಿರುಗಿದ್ದರು. ಇವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ. ಲಂಡನ್ ದೇಶಕ್ಕೆ ಪ್ರಯಾಣ ಬೆಳೆಸಿದ 25 ವರ್ಷದ ಮಹಿಳೆ ಮಾ.18 ರಂದು ಬೆಂಗಳೂರಿಗೆ ವಾಪಸ್ಸಾಗಿದ್ದರು. ಇವರನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ. ದಿಲ್ಲಿಯಿಂದ ಮಾ.13 ರಂದು ಪ್ರಯಾಣ ಬೆಳೆಸಿದ್ದ ತುಮಕೂರು ಮೂಲದ 60 ವರ್ಷದ ಪುರುಷರೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ತುಮಕೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. 24 ಹೈರಿಸ್ಕ್ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಇವರಲ್ಲಿ 13 ಜನರನ್ನು ಪ್ರತ್ಯೇಕಗೊಳಿಸಲಾಗಿದೆ. 8 ನೆಗೆಟಿವ್ ವರದಿ ಬಂದಿದೆ.

ಬೆಂಗಳೂರಿನ ನಿವಾಸಿಯಾಗಿರುವ 33 ವರ್ಷದ ಮಹಿಳೆ (ಈ ಹಿಂದೆ ಕೊರೋನ ಸೋಂಕು ದೃಢಪಟ್ಟವರ ಮನೆಯ ಕೆಲಸದವರು)ಯಲ್ಲಿ ಸೋಂಕು ದೃಢಪಟ್ಟಿದ್ದು, ಇಲ್ಲಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕ ಮಾಡಲಾಗಿದೆ. ದುಬೈನಿಂದ ಆಗಮಿಸಿದ್ದ ಉತ್ತರ ಕನ್ನಡ ಜಿಲ್ಲೆಯ ನಿವಾಸಿ 22 ವರ್ಷದ ಯುವಕರಲ್ಲಿ ಸೋಂಕು ದೃಢಪಟ್ಟಿದ್ದು, ಇಲ್ಲಿನ ಉತ್ತರ ಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ. ದಾವಣಗೆರೆಯ ನಿವಾಸಿ 18 ವರ್ಷದ ಯುವಕ ಪ್ಯಾರೀಸ್ ದೇಶಕ್ಕೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಮಾ.18 ರಂದು ಭಾರತಕ್ಕೆ ಬಂದಿದ್ದರು. ಇವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯಾದ 21 ವರ್ಷದ ಯುವಕ ದುಬೈ ದೇಶಕ್ಕೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಿದ್ದು, ಇವರನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ಕರ್ನಾಟಕದಲ್ಲಿ ಕೋವಿಡ್ 19 ಪತ್ತೆಯಾದ ಸೋಂಕಿತರ ಪೈಕಿ 6 ಪ್ರಕರಣಗಳು ಕೇರಳದವರಾಗಿದ್ದು, ಅವರು ಕರ್ನಾಟಕದ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕರ್ನಾಟಕದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸಂಪರ್ಕ ಸಾಧಿಸಲು 1 ಸಾವಿರ ತಂಡಗಳನ್ನು ರಚಿಸುವಿಕೆ, ತರಬೇತಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಅಡೆತಡೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಎಬಿಆರ್ ಕೆ ಕಾರ್ಡ್‍ಗಳ ವಿತರಣೆಯನ್ನು ಎ.30ರವರೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಕೊರೋನ ಸೋಂಕಿತ ವ್ಯಕ್ತಿಗಳು ಸಾರಿಗೆ ಬಳಸಿದ್ದಲ್ಲಿ ಕೂಡಲೇ ಉಚಿತ ಆರೋಗ್ಯ ಸಹಾಯವಾಣಿ ಸಂಪರ್ಕಿಸಬೇಕಿದೆ.

ರಾಜ್ಯ ಔಷಧ ನಿಯಂತ್ರಕರಿಗೆ ಪತ್ರದ ಮೂಲಕ ಯಾವುದೇ ಅಧಿಕೃತ ವೈದ್ಯರ ಚೀಟಿಯಿಲ್ಲದಿದ್ದರೆ ಕ್ಲೋರೋಕ್ಯೂನ್ ಮತ್ತು ಹೈಡ್ರೋಕ್ಲೋರೋಕ್ಯೂನ್ ನೀಡಬಾರದು. ಮನೆ ಮನೆಗೆ ಉಚಿತ ಔಷಧಿ ತಲುಪಿಸಲು ಕೆಲಸ ಮಾಡುತ್ತಿರುವವರಿಗೆ ಆದ್ಯತೆಯ ಮೇರೆಗೆ ಕ್ರಮ ವಹಿಸಲು ಸೂಚಿಸಲಾಗಿದೆ. ರಾಜ್ಯ ಸರಕಾರವು ಇ-ಕಾಮರ್ಸ್, ಚಿಲ್ಲರೆ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅನುಮತಿ ನೀಡಿದ್ದು, ಕಡ್ಡಾಯವಾಗಿ ಅಧಿಕೃತ ಪಾಸ್‍ಗಳನ್ನು ಹೊಂದಿರಬೇಕು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News