ಕಲಬುರಗಿ ಜಿಲ್ಲಾದ್ಯಂತ ಪೆಟ್ರೋಲ್ ಬಂಕ್ ಬಂದ್: ಜಿಲ್ಲಾಧಿಕಾರಿ ಶರತ್ ಆದೇಶ

Update: 2020-03-27 16:04 GMT

ಕಲಬುರಗಿ, ಮಾ.27: ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕಿಗೀಡಾಗಿದ್ದ ವೃದ್ದರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ ಪೆಟ್ರೋಲ್ ಬಂಕ್ ಮುಚ್ಚುವುದು ಅತ್ಯವಶ್ಯಕ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. 

ಕಲಬುರಗಿ ಜಿಲ್ಲೆಯಾದ್ಯಂತ ಸಿಆರ್ ಪಿಸಿ ಕಾಯ್ದೆ 1973ರ ಕಲಂ 133ರನ್ವಯ ಅಧಿಕಾರ ಚಲಾಯಿಸುವ ಮೂಲಕ, ಮುಂದಿನ ಆದೇಶದವರೆಗೆ ಜಿಲ್ಲೆಯ ಎಲ್ಲ ಪೆಟ್ರೋಲ್ ಬಂಕ್ ಮುಚ್ಚುವಂತೆ ಷರತ್ತುಬದ್ಧ ಆದೇಶ ಹೊರಡಿಸಿದ್ದಾರೆ. 

ಯಾರಿಗೆಲ್ಲ ಸಿಗುತ್ತೆ ಪೆಟ್ರೊಲ್: ಈ ಆದೇಶವು ಸರಕಾರಿ ವಾಹನಗಳಿಗೆ, ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗಳಿಗೆ ಎಲ್ಲಾ ತರಹದ ಅಂಬುಲೆನ್ಸ್ ಗಳಿಗೆ, ಔಷಧ ವ್ಯಾಪಾರಿಗಳಿಗೆ, ಪತ್ರಕರ್ತರಿಗೆ, ಕೇವಲ ಅವಶ್ಯಕ ಸೇವಾ ವ್ಯಾಪ್ತಿಯೊಳಪಡುವ ಇಲಾಖೆಗಳು ಹಾಗೂ ಸರಕಾರಿ ನೌಕರರಿಗೆ ಅನ್ವಯಿಸತಕ್ಕದ್ದಲ್ಲ, ಮೇಲಿನವರು ಇಂಧನ ಭರಿಸುವ ಸಮಯದಲ್ಲಿ ಕಡ್ಡಾಯವಾಗಿ ಅವರ ಗುರುತಿನ ಚೀಟಿಯನ್ನು ಪರಿಶೀಲಿಸಿ ಇಂಧನ ಪಡೆಯಬಹುದೆಂದು ಸೂಚಿಸಿದ್ದಾರೆ

ಸುದ್ದಿ ತಿಳಿಯುತ್ತಿದಂತೆ ಜನರು ಪೆಟ್ರೋಲ್ ತುಂಬಿಸಿಕೊಳ್ಳಲು ಪೆಟ್ರೋಲ್ ಬಂಕ್ ಬಳಿ ದೌಡಾಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News