ದಿಲ್ಲಿ: ಆರದ ಗಾಯ

Update: 2020-03-27 17:39 GMT

ನೀವು ಗಲಭೆ ಪೀಡಿತ ಸ್ಥಳಕ್ಕೆ ಹೋಗಿ ಅಲ್ಲಿನ ಜನರಿಗೆ ನೆರವಾಗಿ ಎಂದು ಹಲವು ಬಾರಿ ಕೇಳಿಕೊಂಡ ಎಸ್‌ಐಒ ಸಂಸ್ಥೆಯ ಮಾಝ್ ಅವರ ಮಾತಿಗೆ ಬೆಲೆ ಕೊಟ್ಟು ಕಚೇರಿ ಬಿಟ್ಟು ಗಲಭೆಯಾದ ಪ್ರದೇಶವಾದ ಗೋಕುಲ್ ಪುರಿಗೆ ನನ್ನ ಇಬ್ಬರು ಪತ್ರಕರ್ತ ಮಿತ್ರರೊಂದಿಗೆ ಹೊರಟೆ. ಅವರಿಗೆ ಅಂದು ಡ್ಯೂಟಿ ಇದ್ದದ್ದು ದಿಲ್ಲಿಯ ಅತೀ ಕನಿಷ್ಠ ಗಲಭೆ ಪೀಡಿತ ಪ್ರದೇಶವಾದ ಖಾರೆರಿ ಖಾಸ್‌ನಲ್ಲಿ. ಅದು ದೇಶದ ಮಾಧ್ಯಮಗಳು, ನಾರ್ತ್ ಈಸ್ಟ್ ದಿಲ್ಲಿಯ ಗಲಭೆಯ ಕುರಿತು ಅತೀ ಹೆಚ್ಚು ಚರ್ಚಿಸಿದ ಪ್ರದೇಶ. ಏಕೆಂದರೆ ಆ ಪ್ರದೇಶದಲ್ಲಿ ಎರಡು ಪ್ರಮುಖ ವ್ಯಕ್ತಿಗಳಾದ ಮುಹಮ್ಮದ್ ಅನೀಸ್ ಎಂಬ ಬಿಎಸ್‌ಎಫ್ ಜವಾನ ಮತ್ತು ಎರಡನೆಯದಾಗಿ ಮಾಧ್ಯಮಗಳು ಈ ಗಲಭೆಯ ರೂವಾರಿಯೆಂದು ಚಿತ್ರಿಸುತ್ತಿರುವ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ತಾಹಿರ್ ಎಂಬವರ ಮನೆಗಳು ಹತ್ತಿರವಿರುವುದರಿಂದ. ಹಲವಾರು ದಿನಗಳಿಂದ ದೇಶದ ಮುಖ್ಯ ಧಾರೆಯ ಪತ್ರಕರ್ತರೆಲ್ಲರೂ ಹಲವು ದಿನಗಳಿಂದ ಅತೀ ಹೆಚ್ಚು ಗಲಭೆ ನಡೆದ ಪ್ರದೇಶವಾದ ಶಿವ್ ವಿಹಾರ್, ಕರ್ದಮ್ ಪುರಿ, ಗೋಕುಲ್ ಪುರಿ ಮತ್ತು ನೂರೇ ಇಲಾಹಿಯಂತಹ ಪ್ರದೇಶಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿಯ ಕುರಿತು ವರದಿ ಮಾಡುವುದನ್ನು ಬಿಟ್ಟು, ಶಿವ್ ವಿಹಾರ್ ಮತ್ತು ಗೋಕುಲ್ ಪುರಿಯ ಬಳಿ ಇರುವ ಒಳಚರಂಡಿಯಲ್ಲಿ ಕೆಲವು ಶವಗಳು ದೊರೆತಿವೆ. ಇನ್ನೂ ಹಲವಾರು ಶವಗಳು ಅಲ್ಲಿಯೇ ಇರಬಹುದೆಂದು ಸ್ಥಳೀಯರು ಪದೇಪದೇ ಹೇಳುತ್ತಿದ್ದರು.

ದಿಲ್ಲಿ ಪೊಲೀಸ್ ಮತ್ತು ಅಲ್ಲಿನ ಸರಕಾರ ಅದರ ಕುರಿತು ಏನು ಮಾಡುತ್ತಿದೆ ಎನ್ನುವುದರ ಕುರಿತು ವರದಿ ಮಾಡುವ ಬಗ್ಗೆಯಾಗಲಿ ಅವರ ಮನೆಯ ಸ್ಥಿತಿಗತಿಯಕುರಿತು ವರದಿ ಮಾಡುವುದನ್ನು ಬಿಟ್ಟು, ಮಾಧ್ಯಮದವರು ಇಡೀ ಗಲಭೆಯನ್ನು ‘‘ಅಂಕಿತ್ ಶರ್ಮಾ ಮತ್ತು ತಾಹಿರ್ ಹುಸೈನ್’’ ಪಿತೂರಿ ಸಿದ್ಧಾಂತಗಳ ಬಗ್ಗೆ ಚರ್ಚಿಸುವುದರಲ್ಲಿಯೇ ವ್ಯರ್ಥ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಅದೇನೇ ಇರಲಿ, ಮಾರ್ಚ್ ಒಂದರಂದು ನಾವು ಗೋಕುಲ್ ಪುರಿ ಮೆಟ್ರೋ ಸ್ಟೇಷನ್ ಬಳಿ ತಲುಪಿದಾಗ ಅಲ್ಲಿಯ ಒಳ ಚರಂಡಿಯಲ್ಲಿ ಒಂದು ಶವ ತೇಲಿ ಬರುತ್ತಿರುವುದು ಕಂಡಿತು. ಅದು ಯಾರ ಶವ ಎಂದು ಜನ ನೋಡುತ್ತಿದ್ದರು. ಅಷ್ಟರಲ್ಲಿ 30 ವರ್ಷ ವಯಸ್ಸಿನ ಕುಮಾರ್ ಎಂಬ ಯುವಕ ಆ ಒಳ ಚರಂಡಿಗೆ ಹಾರಿ ಶವವನ್ನು ಮೇಲೆ ತಂದ. ಆ ಶವದ ಮೇಲೆ ಬಹಳಷ್ಟು ಗಾಯಗಳಿತ್ತು. ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿತ್ತು. ನಂತರ ತಿಳಿಯಿತು ಅದು ಫೆಬ್ರವರಿ 25ರಂದು ಮುಸ್ಲಿಮ್ ನರ ಹತ್ಯೆಯ ಸಂದರ್ಭದಲ್ಲಿ ಕಾಣೆಯಾಗಿದ್ದ ಮುಹಮ್ಮದ್ ಎಂಬ ವ್ಯಕ್ತಿಯ ಶವ ಎಂದು. ಅಂದು ಅಲ್ಲಿ ಅಂಗಡಿ ಹೊಟೇಲ್ ಮುಚ್ಚಿದ್ದರಿಂದ ನಮಗೆ ತಿನ್ನಲು, ಕುಡಿಯಲು ಏನೂ ಸಿಗಲಿಲ್ಲ, ಅಲ್ಲಿಂದ ನಾವು ಟ್ಯಾಕ್ಸಿಯಲ್ಲಿ ಖಾರೆರಿ ಖಾಸ್ ತಲುಪಿದೆವು.
ಖಾರೆರಿ ಖಾಸ್:

ಖಾರೆರಿ ಖಾಸ್‌ನಲ್ಲಿ ಮಿಲಿಟರಿ ಮತ್ತು ಪೊಲೀಸರ ದಂಡೇ ನಿಂತಿತ್ತು. ಖಾರೆರಿ ಖಾಸ್‌ನ ಎರಡು ಗಲ್ಲಿಗಳಲ್ಲಿ ಹಿಂದೂ ಮುಸ್ಲಿಮ್ ಎರಡೂ ಸಮುದಾಯದವರು ವಾಸವಾಗಿದ್ದರು. ಈ ಗಲ್ಲಿಗಳ ಪೈಕಿ ಒಂದರಲ್ಲಿ ಒಂದು ಕಡೆ ಇಪ್ಪತ್ತು ಮನೆಗಳು ಮುಸ್ಲಿಮರದ್ದಾದರೆ, ಇನ್ನು ಇಪ್ಪತ್ತು ಮನೆಗಳು ಹಿಂದೂಗಳದ್ದು. ಮೊದಲು ಮುಸ್ಲಿಮರ ಮನೆ, ಮಸೀದಿಗಳ ಮೇಲೆ ಭೀಕರವಾದ ಕಲ್ಲು ತೂರಾಟ, ಗ್ಯಾಸ್ ಸಿಲಿಂಡರ್ ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಯಿತು. ನಂತರ ಅವರು ತನ್ನ ಜೀವ ಉಳಿಸಲೆಂದು ಅಲ್ಲಿಂದ ಓಡಬೇಕಾಯಿತು ಎಂದು ಸ್ಥಳೀಯ ನಿವಾಸಿಗಳು ತನ್ನ ಅಳಲನ್ನು ತೋಡಿಕೊಂಡರು. ಇದರಲ್ಲಿ ಕೇವಲ ಮುಸ್ಲಿಮರ ಇಪ್ಪತ್ತು ಮನೆಗಳು, ಮಸೀದಿ, ಮದ್ರಸವನ್ನು ಮೊದಲು ಲೂಟಿ ಮಾಡಲಾಯಿತು. ನಂತರ ಅದನ್ನು ದಹಿಸಲಾಯಿತು, ಎಂದರೆ ಆ ಗಲ್ಲಿಯಲ್ಲಿದ್ದ ಎಲ್ಲಾ ಮುಸ್ಲಿಮರ ಮನೆಗಳನ್ನು ಮಾತ್ರ ದಹಿಸಿದರು. ಹಿಂದೂಗಳು ವಾಸಿಸುವ ಯಾವುದೇ ಮನೆಗೆ ಅಗ್ನಿ ಸ್ಪರ್ಶಿಸಲಿಲ್ಲ ಎಂಬುದು ವಿಶೇಷ.

ಎರಡನೆಯ ಗಲ್ಲಿ ಎಂದರೆ ಅತೀ ಹೆಚ್ಚು ಚರ್ಚಿತವಾದ ಸ್ಥಳ ಏಕೆಂದರೆ ಅಲ್ಲಿ ಮುಹಮ್ಮದ್ ಅನೀಸ್ ಎಂಬ ಬಿಎಸ್‌ಎಫ್ ಜವಾನನ ಮನೆಯು ದಹಿಸಲ್ಪಟ್ಟಿತ್ತು. ಆ ಗಲ್ಲಿಯಲ್ಲಿಯೂ ಸುಮಾರು ಇಪ್ಪತ್ತು ಮನೆಗಳಿತ್ತು. ಅದರ ಪೈಕಿ ಸುಮಾರು 9 ಮುಸ್ಲಿಮರು ವಾಸಿಸುತ್ತಿದ್ದ ಮನೆಗಳು. ಆ ಎಲ್ಲಾ ಮನೆಗಳು ಎಂದರೆ ಕೇವಲ ಮುಸ್ಲಿಮರು ವಾಸಿಸುತ್ತಿದ್ದ ಮನೆಗಳನ್ನು ಮಾತ್ರ ಆಯ್ದು ದಹಿಸಲಾಯಿತು. ಇದನ್ನು ನೋಡಿದ ಹಿಂದಿಯ ಪತ್ರಕರ್ತ ಮಿತ್ರ ಶಾಹಿದ್ ಸುಮನ್ ಇದನ್ನು ಗಲಭೆ ಎಂದು ಏಕೆ ಹೆಸರಿಸಿದ್ದಾರೆ? ಒಂದು ವೇಳೆ ಇದು ಗಲಭೆಯಾಗಿರುತ್ತಿದ್ದರೆ ಕೇವಲ ಒಂದು ಸಮುದಾಯದ ಮನೆಗಳು ಮಾತ್ರವೇಕೆ ದಹಿಸಲ್ಪಟ್ಟಿವೇ? ಇದು ಸಂಪೂಣ ಪೂರ್ವ ನಿಯೋಜಿತ ಮುಸ್ಲಿಮರ ನರಹತ್ಯೆಯಾಗಿದ್ದುದರಿಂದ ಈ ರೀತಿ ಮುಸ್ಲಿಮರ ಮತ್ತು ಹಿಂದೂಗಳ ಮನೆಗಳನ್ನು ಗಲಭೆಕೋರರು ಸರಿಯಾಗಿ ಪತ್ತೆಹಚ್ಚಿದ್ದಾರೆ. ಈ ಗಲಭೆಕೋರರಿಗೆ ಸ್ಥಳೀಯರ ಸಹಕಾರವೂ ಇದ್ದಿರಬೇಕು. ಇಲ್ಲದಿದ್ದಲ್ಲಿ ಎರಡು ಗಲ್ಲಿಗಳ ಕೇವಲ ಮುಸ್ಲಿಮರ ಮನೆಗಳನ್ನೇ ಆಯ್ದು ನಾಶ ಪಡಿಸಲು ಸಾಧ್ಯವೇ ಇರುತ್ತಿರಲಿಲ್ಲ ಎಂದರು. ನನಗೂ ಹೌದು ಹಾಗೆಯೇ ಇರಬಹುದು ಎಂದೆನಿಸಿತು. ಏಕೆಂದರೆ ಅವರು ಹಲವಾರು ದಿನಗಳಿಂದ ಈ ಪ್ರದೇಶಗಳಿಗೆ ನಿರಂತರ ಭೇಟಿ ನೀಡುತ್ತಿದ್ದಾರೆ. ಅವರ ಅನುಭವವು ಸರಿ ಇರಬಹುದೆಂದು ಸುಮ್ಮನಾದೆ.

ಮಾಧ್ಯಮಗಳು ಸುಳ್ಳು ಪ್ರಚಾರ ಮಾಡುತ್ತಿವೆ:

ಫಾತ್ಮಿ ಮಸೀದಿಯ ಬಳಿಯಿರುವ ಒಂದು ಮನೆಯ ಸ್ಥಿತಿಯನ್ನು ವರದಿ ಮಾಡೆಲೆಂದು ಅವರ ಮನೆಯವರನ್ನು ಹುಡುಕಾಡಿದೆವು. ಆಗ ಯಾರು ನಮ್ಮ ಜೊತೆ ಮಾತನಾಡಲು ಮುಂದೆ ಬರಲಿಲ್ಲ. ಒಮ್ಮೆಲೇ ಒಬ್ಬ ಯುವಕ ಮುಂದೆ ಬಂದು, ‘‘ನೀವು ಯಾರು, ಏಕೆ ಇಲ್ಲಿಗೆ ಬಂದಿದ್ದೀರಿ? ನಾವು ಮಾಧ್ಯಮದವರೊಂದಿಗೆ ಮಾತನಾಡುವುದಿಲ್ಲ. ನೀವು ಮಾಧ್ಯಮದವರಾಗಿದ್ದರೆ ದಯವಿಟ್ಟು ಇಲ್ಲಿಂದ ಹೋಗಿ’’ ಎಂದ. ‘‘ಏಕೆ ಏನಾಯಿತು?’’ ಕೇಳಿದೆವು. ‘‘ಅಲ್ಲ ಮಾಧ್ಯಮದವರು ನಮ್ಮ ಜನರನ್ನು ನಾವೇ ಕೊಂದೆವು, ನಮ್ಮ ಮನೆಗಳನ್ನು ನಾವೇ ಸುಟ್ಟೆವು ಎಂದೆಲ್ಲ ಸುಳ್ಳು ಸುದ್ದಿ ಹಬ್ಬುತ್ತಿದ್ದಾರೆ ಅದಕ್ಕಾಗಿ ನಾವು ಯಾರೂ ಮಾಧ್ಯಮದವರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ’’ ಎಂದು ಹೇಳಿದ. ‘‘ನಾವು ಅಂತಹ ಮಾಧ್ಯಮದವರಲ್ಲ ದಯವಿಟ್ಟು ನಮ್ಮನ್ನು ನಂಬಿ’’ ಎಂದು ಆತನಿಗೆ ನಮ್ಮ ಮಾಧ್ಯಮದ ಗುರುತಿನ ಚಿ  ೀಟಿಯನ್ನು ತೋರಿಸಿದೆವು. ಆತ ನಮ್ಮಂದಿಗೆ ಮಾತನಾಡಲು ಸಿದ್ಧನಾದ.

ಬಿಎಸ್‌ಎಫ್‌ನ ಜವಾನ ಮತ್ತು ಮಾಧ್ಯಮಗಳು:
 ಬಿಎಸ್‌ಎಫ್‌ನ ಮುಹಮ್ಮದ್ ಅನೀಸ್ ಎಂಬ ಜವಾನನ ಮನೆಯನ್ನು ಕೂಡ ಈ ಗಲ್ಲಿಯಲ್ಲಿಯೇ ದಹಿಸಿದ್ದಾರೆ ಎಂದು ಮುಖ್ಯ ವಾಹಿನಿಯ ಮಾಧ್ಯಮಗಳು ತಡವಾಗಿ ವರದಿ ಮಾಡಿದವು. ನಾವು ಅಲ್ಲಿ ತಲುಪಿದಾಗ ಆ ಗಲ್ಲಿಯಲ್ಲಿ ಬಹಳಷ್ಟು ಬಿಎಸ್‌ಎಫ್‌ನ ಜವಾನರು ತಮ್ಮ ಜವಾನನ ಮನೆ ಸರಿಪಡಿಸುವುದರಲ್ಲಿ ತೊಡಗಿದ್ದರು. ಎಂದರೆ ಕೇವಲ ಆತನ ಒಂದು ಮನೆಯನ್ನು ಮಾತ್ರ ಅಲ್ಲಿ ಸರಿಪಡಿಸಲಾಗುತ್ತಿತ್ತು. ಮೇಲ್ನೋಟಕ್ಕೆ ನೋಡಿದಾಗ ಆ ಜವಾನರ ಮುಖದಲ್ಲೆಲ್ಲಿಯೂ ತನ್ನ ಗೆಳೆಯನ ಮನೆ ದಹನವಾದ ಬೇಸರವೇನು ವ್ಯಕ್ತವಾಗುತ್ತಿರಲಿಲ್ಲ. ಎಂದರೆ ಒಡಿಶಾ ಗಡಿ ಪ್ರದೇಶದಲ್ಲಿ ಡ್ಯೂಟಿಯಲ್ಲಿದ್ದ ಒಬ್ಬ ಜವಾನನ ಮನೆಯನ್ನು ಲೂಟಿಮಾಡಿದ ನಂತರ ಅದನ್ನು ದಹಿಸಿದ್ದು, ಆತನ ಮನೆಯವರು ತಮ್ಮ ಜೀವ ಉಳಿಸಲೆಂದು ಜಾಗ ಖಾಲಿ ಮಾಡಿದ್ದರು. ತನ್ನ ಮಗ ದೇಶಕ್ಕಾಗಿ ಗಡಿ ಕಾಯುತ್ತಿದ್ದಾನೆ, ಕನಿಷ್ಠ ಪಕ್ಷ ಆ ಕಾರಣಕ್ಕಾದರೂ ಜನರು ತಮ್ಮನ್ನು ಗೌರವಿಸುವರು ಎಂದು ನಂಬಿದ್ದರೋ ಏನೋ? ಆದರೆ ನಡೆದದ್ದೇ ಬೇರೆ. ಅವರು ತನ್ನ ಗಲ್ಲಿಯ ಸುಮಾರು ಎಲ್ಲಾ ಮನೆಗಳು ಕೇವಲ ಮುಸ್ಲಿಮರ ಮನೆಗಳು ಎಂಬ ಕಾರಣಕ್ಕೆ ಸರ್ವನಾಶವಾಗುವಾಗ, ಇದು ಜವಾನನ ಮನೆ, ಇದು ಜವಾನನ ಮನೆಯವರು ಎಂಬ ಬಗ್ಗೆ ಆ ಗುಂಪು ನೋಡಿಲ್ಲ.

ಅದೇನೇ ಇರಲಿ, ದೇಶದಾದ್ಯಂತ ಸೈನಿಕರು ಎಂದು ನಿರಂತರ ಜಪ ಮಾಡುವ ಮಾನ್ಯ ರಕ್ಷಣಾ ಸಚಿವರಾಗಲಿ, ಗೃಹ ಸಚಿವರಾಗಲಿ ಆ ಪ್ರದೇಶಕ್ಕೆ ಭೇಟಿ ನೀಡಿಲ್ಲ ಎಂಬುದು ವಿಪರ್ಯಾಸ. ಇನ್ನು ಕಡೆಯ ಪಕ್ಷ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಐಬಿ ಅಧಿಕಾರಿ ಅಂಕಿತ್ ಶರ್ಮಾರ ಮನೆಗೆ ಭೇಟಿ ನೀಡಿ, ಸುಮಾರು 1 ಕೋಟಿ ರೂ. ಪರಿಹಾರ ಘೋಷಿಸಿದರು. ಆದರೆ ಅವರು ಕೂಡ ಇತ್ತ ಬರಲೇ ಇಲ್ಲ. ಸೈನಿಕನಿಗೂ ಯಾವುದೇ ಪ್ರತ್ಯೇಕ ಪರಿಹಾರ ಘೋಷಿಸಿಲ್ಲವೆಂದು ಸ್ಥಳೀಯರಾದ ನಈಮ್ ಹೇಳುತ್ತಿದ್ದರು. ನಾವು ಹೋದ ಸಂದರ್ಭದಲ್ಲಿ ಅಂದೇ ನಈಮ್ ತನ್ನ ಮನೆ ನೋಡಲು, ಜೀವ ಉಳಿಸಿಕೊಂಡಿದ್ದ ತನ್ನ ಮನೆಯವರನ್ನು ಕಾಣಲು ಬಂದಿದ್ದ. ನಾನು ಆ ಜನರ ತುರ್ತು ಅವಶ್ಯಕತೆಗಳ ಕುರಿತು ಅವರಲ್ಲಿ ಕೇಳಿದೆ. ಅಷ್ಟರಲ್ಲಿ ಒಡಿಶಾದ ಟಿ ವಿ ಮಾಧ್ಯಮದ ಒಬ್ಬ ಪತ್ರಕರ್ತ ತನ್ನ ಕ್ಯಾಮರಾ ಮ್ಯಾನ್ ಜೊತೆ ಅಲ್ಲಿಗೆ ಬಂದ.

ಆತ ಮುಹಮ್ಮದ್ ಅನೀಸ್ ರನ್ನು ಕೇಳಿದ ಪ್ರಶ್ನೆಯು ನನಗೆ ಅಚ್ಚರಿ ಮೂಡಿಸಿತು. ನಿಮಗೆ ಒಡಿಶಾ ಮುಖ್ಯಮಂತ್ರಿ ವಿಶೇಷ ಪರಿಹಾರ ಧನವನ್ನು ಘೋಷಿಸಿದ್ದಾರೆ, ಅದರ ಬಗ್ಗೆ ನೀವೇನೆನ್ನುತ್ತೀರಿ? ಆಗ ಮುಹಮ್ಮದ್ ಅನೀಸ್ ಥ್ಯಾಂಕ್ ಯು ಒಡಿಸಾ ಸರಕಾರ ಎಂದು ಉತ್ತರಿಸಿದರು. ನಂತರ ಆ ವರದಿಗಾರ ಒಡಿಶಾ ಭಾಷೆಯಲ್ಲಿ ಒಂದೆರಡು ನಿಮಿಷ ಏನೋ ಹೇಳಿ ಹೊರಟು ಬಿಟ್ಟ. ಮತ್ತೆ ಸ್ವಲ್ಪ ಸಮಯದ ನಂತರ ಝೀ ನ್ಯೂಸ್‌ನ ಒಬ್ಬ ಪತ್ರಕರ್ತ ಬಂದು ‘‘ಇಂದು ನಿಮ್ಮೆಂದಿಗೆ ಬಿಎಸ್‌ಎಫ್‌ನ ಟೀಮ್ ನಿಮ್ಮ ಮನೆ ಸರಿಪಡಿಸಲು ಬಂದಿದೆ. ಇದನ್ನು ನೀವು ಹೇಗೆ ಕಾಣುತ್ತೀರಿ?’’ ಎಂದು ಕೇಳಿದ, ಅದಕ್ಕೆ ‘‘ಥಾಂಕ್ ಯು ಬಿಎಸ್‌ಎಫ್ ಪರಿವಾರ್’’ ಎಂದು ಅನೀಸ್ ಉತ್ತರಿಸಿದರು. ನಂತರ ಅವರ ತಂದೆಯೊಂದಿಗೆ ಇದೇ ರೀತಿ ಪ್ರಶ್ನಿಸಿ ವರದಿ ಮಾಡುತ್ತಿದ್ದ. ಯಾರೋ ಒಬ್ಬ ಸ್ಥಳೀಯ ಯುವಕ ಝೀ ನ್ಯೂಸ್ ಪತ್ರಕರ್ತನ ಬಳಿ ಹೋಗಿ, ಇದೊಂದು ಪ್ರಶ್ನೆಯೇ? ನೀವು ಈ ಸಂದರ್ಭದಲ್ಲಿಯೂ ಸರಕಾರದ ಗುಲಾಮಗಿರಿ ಏಕೆ ಮಾಡುತ್ತಿದ್ದೀರಿ? ಎಂದು ಅವನಿಗೆ ಕೇಳುವಂತೆ ಜೋರಾಗಿಯೇ ಕೇಳಿದ. ಆದರೆ ಆ ಪತ್ರಕರ್ತ ಕೇಳಿಯೂ ಕೆಳದವನಂತೆ ಮುನ್ನಡೆದ.

ದೇಶದಾದ್ಯಂತ ಕೊರೋನ ವೈರಸ್ ಭೀತಿಯಿಂದ ಬಳಲುತ್ತಿರುವ ಈ ಸಂದರ್ಭದಲ್ಲಿ ಶೇಕ್ ಮುಜ್ತಬ ಫಾರೂಕ್ ಎಂಬ ಸಾಮಾಜಿಕ ಕಾರ್ಯಕರ್ತನ, ಪಿಐಎಲ್ ಅರ್ಜಿಯನ್ನು ಪರಿಶೀಲಿಸಿದ ದೆಹಲಿ ಹೈ ಕೋರ್ಟ್ ದೆಹಲಿಯ ಗಲಭೆಗ್ರಸ್ತ ಪ್ರದೇಶದಲ್ಲಿರುವ ನಿರ್ವಸಿತರಿಗಾಗಿ ತಾತ್ಕಾಲಿಕವಾದ ಸರಿಯಾದ ವ್ಯವಸ್ಥೆಯನ್ನು ಮಾಡುವಂತೆ, ಇನ್ನೂ ಹೆಚ್ಚಿನ ನಿರಾಶ್ರಿತ ಕ್ಯಾಂಪುಗಳನ್ನು ತೆರೆಯುವಂತೆ, ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಆದೇಶಿಸಿದೆ ಎನ್ನುವುದು ಒಂದು ಉತ್ತಮ ಹೆಜ್ಜೆೆ. ಮೊನ್ನೆ ತಾನೇ ಭೀಕರ ದಂಗೆಯಲ್ಲಿ ತನ್ನ ಕುಟುಂಬಸ್ಥರನ್ನು ಕಳೆದುಕೊಂಡು, ಮನೆಯನ್ನು ಕಳೆದುಕೊಂಡು ದುಃಖ ಮತ್ತು ಸಂಕಷ್ಟದಲ್ಲಿ ಮುಳುಗಿರುವ ಈ ನಿರಾಶ್ರಿತರಿಗೆ ಒಂದು ಕಡೆ ತನ್ನ ಭವಿಷ್ಯದ ದುಃಖಮಯ ಜೀವನ ಮುಂದಿದ್ದರೆ, ಇನ್ನೊಂದೆಡೆ ಈ ಕೊರೋನ ವೈರಸ್ ಭೀತಿ ಅವರನ್ನು ಅತಿಯಾಗಿ ಕಾಡಬಹುದು ಎನ್ನವುದರಲ್ಲಿ ಸಂಶಯವಿಲ್ಲ.

Writer - ತಲ್ಹ ಇಸ್ಮಾಯೀಲ್ ಬೆಂಗ್ರೆ

contributor

Editor - ತಲ್ಹ ಇಸ್ಮಾಯೀಲ್ ಬೆಂಗ್ರೆ

contributor

Similar News