ಚಿಕ್ಕಮಗಳೂರು ಜಿಲ್ಲೆಯಲ್ಲಿ 234 ಮಂದಿಗೆ 'ಹೋಮ್ ಕ್ವಾರೈಂಟೈನ್'

Update: 2020-03-27 17:47 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಮಾ.27: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಶುಕ್ರವಾರ 12 ಜನರನ್ನು ಸ್ಕ್ರೀನಿಂಗ್‍ಗೆ ಒಳಪಡಿಸಲಾಗಿದ್ದು, ವಿದೇಶಗಳಿಗೆ ಭೇಟಿ ನೀಡಿ ಜಿಲ್ಲೆಗೆ ಹಿಂದಿರುಗಿದ ಒಟ್ಟು 247 ಜನರನ್ನು ಇದುವರೆಗೆ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

28 ದಿನಗಳ ನಿಗಾ ಅವಧಿಯನ್ನು ಶುಕ್ರವಾರ ಜಿಲ್ಲೆಯಲ್ಲಿ ಓರ್ವರು ಪೂರೈಸಿದ್ದು ಇಲ್ಲಿಯವರೆಗೆ 9 ಜನರು 28 ದಿನಗಳ ಹೋಮ್ ಕ್ವಾರೈಂಟೈನ್ ಅವಧಿಯನ್ನು ಪೂರೈಸಿದ್ದಾರೆ. ಶುಕ್ರವಾರ ಜಿಲ್ಲಾದ್ಯಂತ ವಿದೇಶಗಳಿಂದ ಬಂದಿರುವ 12 ಮಂದಿ ಹೊಸದಾಗಿ ನೋಂದಣಿಯಾಗಿದ್ದು, ಈ ಪೈಕಿ 11 ಮಂದಿಗೆ ಹೋಮ್ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಈ 11 ಮಂದಿ ಸೇರಿದಂತೆ ಜಿಲ್ಲೆಯಲ್ಲಿ ಹೋಮ್ ಕ್ವಾರೈಂಟೈನ್ ನಿಗಾದಲ್ಲಿರುವವರ ಸಂಖ್ಯೆ 234ಕ್ಕೇರಿದ್ದು, ಎಲ್ಲರಿಗೂ 28 ದಿನಗಳಿಗೂ ಮುನ್ನ ಮನೆಗಳಿಂದ ಹೊರ ಬಾರದಂತೆ ಎಚ್ಚರಿಕೆ ನೀಡಲಾಗಿದೆ.

ಇಂದು ಒರ್ವರ ರಕ್ತದ ಮಾದರಿ ಮತ್ತು ಗಂಟಲ ದ್ರವನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದ್ದು, ಇದುವರೆಗೂ 9 ಜನರ ರಕ್ತದ ಮಾದರಿ ಮತ್ತು ಗಂಟಲ ದ್ರವವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, 8 ಜನರ ರಕ್ತದ ಮಾದರಿ ಮತ್ತು ಗಂಟಲ ದ್ರವದ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಅಂಶ ಬಂದಿದೆ. ಓರ್ವರ ವೈದ್ಯಕೀಯ ಪರೀಕ್ಷಾ ವರದಿ ಶನಿವಾರ ವೈದ್ಯರಿಗೆ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣ ದೃಢಪಟ್ಟಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News