ಕೊರೋನ: ವಿದೇಶಗಳಿಂದ ಮರಳಿದ 15 ಲಕ್ಷ ಮಂದಿ ಮೇಲೆ ಕಣ್ಗಾವಲು

Update: 2020-03-28 04:33 GMT

ಹೊಸದಿಲ್ಲಿ, ಮಾ.28: ದೇಶದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಹರಡುವುದನ್ನು ತಡೆಯಲು ಹರಸಾಹಸ ಮಾಡುತ್ತಿರುವ ಕೇಂದ್ರ ಸರ್ಕಾರ, ಜನವರಿ 18ರಿಂದ ಮಾರ್ಚ್ 23ರವರೆಗೆ ವಿದೇಶಗಳಿಂದ ಭಾರತಕ್ಕೆ ಮರಳಿದ ಸುಮಾರು 15 ಲಕ್ಷ ಮಂದಿಯ ಮೇಲೆ ಕಣ್ಗಾವಲು ಇಡುವಂತೆ ಸೂಚಿಸಿದೆ.

ದೇಶದಲ್ಲಿ ಕೊರೋನ ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ವಿದೇಶಗಳಿಂದ ಬಂದ ಬಳಿಕ ಆರೋಗ್ಯ ತಪಾಸಣೆ- ಕ್ವಾರಂಟೈನ್ ಸರ್ವೇಕ್ಷಣೆ ಪ್ರಕ್ರಿಯೆಗೆ ಸಿಕ್ಕದ ವ್ಯಕ್ತಿಗಳನ್ನು ಪತ್ತೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.

ವಿದೇಶ ಪ್ರವಾಸ ಕೈಗೊಂಡವರ ಪೈಕಿ ಬಹಳಷ್ಟು ಮಂದಿ ಮನೆಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಆದರೆ ಕೆಲವು ಮಂದಿ ಇದರಿಂದ ಹೊರಗುಳಿದಿದ್ದಾರೆ. ಆದ್ದರಿಂದ ವಿದೇಶ ಪ್ರವಾಸ ಕೈಗೊಂಡು, ಸರ್ವೇಕ್ಷಣೆಯಿಂದ ಹೊರತಾಗಿರುವವರನ್ನು ಪತ್ತೆ ಮಾಡುವುದು ಕೋವಿಡ್-19 ಹರಡುವಿಕೆ ತಡೆಗೆ ಅತ್ಯಂತ ಮಹತ್ವದ್ದು ಎಂದು ಅವರು ಪ್ರತಿಪಾದಿಸಿದ್ದಾರೆ. ಕೆಲವರು ಈಗಾಗಲೇ 14 ದಿನಗಳನ್ನು ಪೂರೈಸಿದ್ದು, ಇವರು ಇದೀಗ ಸುರಕ್ಷಿತ ಎನಿಸಿದ್ದಾರೆ. ಆದರೆ ಇತರ ಕೆಲ ಸಂಭಾವ್ಯ ರೋಗ ಹರಡುವ ವ್ಯಕ್ತಿಗಳನ್ನು ಪತ್ತೆ ಮಾಡುವ ಅಗತ್ಯವಿದೆ ಎಂದು ವಿವರಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬ್ಯೂರೊ ಆಫ್ ಇಮಿಗ್ರೇಶನ್ ಈಗಾಗಲೇ, 15 ಲಕ್ಷಕ್ಕೂ ಅಧಿಕ ಮಂದಿಯ ಪಟ್ಟಿಯನ್ನು ರಾಜ್ಯಗಳಿಗೆ ಒದಗಿಸಿದ್ದು, ಕೋವಿಡ್-19 ಕಣ್ಗಾವಲು ವ್ಯವಸ್ಥೆಯಡಿ ತರುವಂತೆ ಸೂಚಿಸಲಾಗಿದೆ ಎಂದು ಸಂಪುಟ ಕಾರ್ಯದರ್ಶಿ ರಾಜೀವ್ ಗವೂಬಾ ಸ್ಪಷ್ಟಪಡಿಸಿದ್ದಾರೆ.

ವಿದೇಶಗಳಿಂದ ವಾಪಸ್ಸಾದವರ ಮೇಲೆ ಅದರಲ್ಲೂ ಮುಖ್ಯವಾಗಿ ಮಾರ್ಚ್‌ನಲ್ಲಿ ಆಗಮಿಸಿದವರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದೇವೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ಕಣ್ಗಾವಲು ವ್ಯವಸ್ಥೆಯಡಿ ಈ ಎಲ್ಲ ಮಂದಿಯನ್ನೂ ಪತ್ತೆ ಮಾಡಿ, ರೋಗ ಹರಡುವಿಕೆ ಸರಪಣಿಯನ್ನು ತುಂಡರಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News