ಕೊರೋನ ಸೋಂಕು: ಭವಿಷ್ಯದಲ್ಲಿ ಹಣ್ಣು-ತರಕಾರಿ ಅಭಾವದ ಆತಂಕ

Update: 2020-03-28 17:39 GMT

ಬೆಂಗಳೂರು, ಮಾ. 28: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಸರಕಾರ ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಘೋಷಣೆ ಮಾಡಿದೆ. ಈ ಮಧ್ಯೆ ಯಾರೊಬ್ಬರು ಮನೆಯಿಂದ ಹೊರಬರಬಾರದೆಂಬ ಕಟ್ಟುನಿಟ್ಟಿನ ಸೂಚನೆ ಹಿನ್ನಲೆಯಲ್ಲಿ ರೈತರು ಮನೆಗಳಲ್ಲಿದ್ದು ಭವಿಷ್ಯದಲ್ಲಿ ಹಣ್ಣು ಮತ್ತು ತರಕಾರಿಗಳ ಅಭಾವ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ರೈತ ಮುಖಂಡರ ಆತಂಕ ವ್ಯಕ್ತಪಡಿಸಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಖುದ್ದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಣೆ ನೀಡಿದ್ದರೂ, ಕೊರೋನ ವೈರಸ್ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ರೈತರು ತಮ್ಮ ತಮ್ಮ ಮನೆಗಳಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲದೆ, ಬೆಳೆದ ಉತ್ಪನ್ನಗಳನ್ನು ಕಟಾವು ಮಾಡಿ ಮಾರುಕಟ್ಟೆಗೂ ಕೊಂಡೊಯ್ಯವ ಸ್ಥಿತಿಯೂ ಇಲ್ಲದಿರುವುದರಿಂದ ರೈತರು ನಷ್ಟಕ್ಕೆ ಸಿಲುಕಿದ್ದಾರೆ.

ಕೃಷಿ ನಷ್ಟ ಪರಿಹಾರದ ಬಗ್ಗೆ ಕೇಂದ್ರ ಸರಕಾರ ಯಾವುದೇ ಮುನ್ಸೂಚನೆ ನೀಡಿಲ್ಲ. ಹೀಗಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಜತೆಗೆ ಗ್ರಾಹಕರಿಗೂ ಸಮರ್ಪಕ ರೀತಿಯಲ್ಲಿ ಹಣ್ಣು ಮತ್ತು ತರಕಾರಿಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಭವಿಷ್ಯದಲ್ಲಿ ಏನಾಗಲಿದೆಯೋ ಎಂದು ಚಿಂತಿತರಾಗಿದ್ದಾರೆ. ಒಂದು ಕಡೆ ಕೊರೋನ ಸೋಂಕು ದೇಶದ ಜನರಲ್ಲಿ ಭೀತಿ ಸೃಷ್ಟಿಸಿದ್ದು, ಅಗತ್ಯ ವಸ್ತುಗಳ ಜನರಿಗೆ ಸೂಕ್ತ ಬೆಲೆಗೆ ದೊರೆಯುತ್ತಿಲ್ಲ ಎಂಬ ಕೊರಗು ವ್ಯಾಪಕವಾಗಿದೆ.

ಪರಿಸ್ಥಿತಿಯ ಲಾಭ ಪಡೆಯಲೆತ್ತಿಸುವ ಕಾಳಸಂತೆಕೋರರ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಭಯ ನೀಡಿದ್ದಾರೆ. ಆದರೂ ಹಣ್ಣುಗಳು ನಿಗದಿತ ಪ್ರಮಾಣದಲ್ಲಿ ಜನರಿಗೆ ದೊರೆಯುತ್ತಿಲ್ಲ. ಇನ್ನೂ ಸೊಪ್ಪು ಮತ್ತು ತರಕಾರಿ ಬೆಲೆ ದುಪ್ಪಟ್ಟಾಗಿದ್ದು, ಕೊರೋನ ಸೋಂಕಿನಷ್ಟೆ ಅಗತ್ಯ ವಸ್ತುಗಳ ಅಲಭ್ಯತೆ ಜನರನ್ನು ಕಂಗೆಡಿಸಿರುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.

ಕೊರೋನ ವೈರಸ್ ಗಾಳಿಯಲ್ಲಿ ಬರುತ್ತದೆ ಎಂದು ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ. ಈ ಹಿಂದೆ ಮೇಕೆ-ಕುರಿ ಮತ್ತು ದನಗಳಿಗೆ ನಾವು ಮೇವು ತಿನ್ನದಂತೆ ಕುಕ್ಕೆ ಇಡುತ್ತಿದ್ದೆವು, ಇದೀಗ ಅದು ಮನುಷ್ಯರಿಗೆ ಬಂದಿದೆ. ಹೀಗಾಗಿ ನಾವು ಮನೆ ಬಿಟ್ಟು ಕದಲುತ್ತಿಲ್ಲ. ಮಾರುಕಟ್ಟೆ ಇಲ್ಲದ ಕಾರಣ ಹೊಲದಲ್ಲಿ ಬೆಳೆದ ತರಕಾರಿ ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಇದು ಯಾವಾಗ ಮುಗಿಯುತ್ತದೋ ಎಂಬ ಆತಂಕ. ನಷ್ಟ ನಮಗೆ ಹೊಸದೇನಲ್ಲ.
-ರುದ್ರಸ್ವಾಮಿ, ರೈತ

..
ಅಂಬಾನಿ, ಅದಾನಿಗೆ ಕೋಟ್ಯಂತರ ರೂ.ಸಾಲ ಮನ್ನಾ ಘೋಷಣೆ ಮಾಡುವ ಮೋದಿ ಸರಕಾರ ರೈತರ ಬೆಳೆ ನಷ್ಟ ಪರಿಹಾರ ಘೋಷಣೆಗೆ ಮೀನಾಮೇಷ ಎಣಿಸುತ್ತಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್‍ನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ದೊಡ್ಡ ಸಂಖ್ಯೆಯಲ್ಲಿ ಹಣ್ಣು-ತರಕಾರಿ ಬೆಳೆಯುವ ರೈತರು ನಷ್ಟದ ಸುಳಿಗೆ ಸಿಲುಕಲಿದ್ದಾರೆ. ಕೇಂದ್ರ-ರಾಜ್ಯ ಸರಕಾರಗಳು ರೈತರತ್ತ ಗಮನ ಹರಿಸಬೇಕಾಗಿದೆ.
-ಮಾರುತಿ ಮಾನ್ಪಡೆ, ಪ್ರಾಂತ ರೈತ ಸಂಘದ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News