ಪೊಲೀಸ್ ಲಾಠಿ ಏಟಿನಿಂದ ವ್ಯಕ್ತಿ ಸಾವು: ಸಿಎಂ ಕ್ಷೇತ್ರದಲ್ಲಿ ಜನರ ಆರೋಪ

Update: 2020-03-29 11:17 GMT

ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ವಕ್ಷೇತ್ರದಲ್ಲೇ ವ್ಯಕ್ತಿಯೊಬ್ಬ ಪೊಲೀಸರ ಲಾಠಿ ಏಟಿನಿಂದ ಸಾವನ್ನಪ್ಪಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಸಮೀಪದ ಸುಣ್ಣದಕೊಪ್ಪ ಗ್ರಾಮದಲ್ಲಿ ಪೊಲೀಸ್ ಲಾಠಿ ಏಟಿನಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಸುಣ್ಣದಕೊಪ್ಪದ ಲಕ್ಷ್ಮಣ ನಾಯ್ಕ್ (50) ಮೃತ ವ್ಯಕ್ತಿ.

ಲಾಕ್​ಡೌನ್​ ಆದೇಶದ ನಡುವೆ ಅವರು ತನ್ನ ಜಮೀನಿಗೆ ನೀರು ಬಿಟ್ಟು ಬರಲು ಹೋಗಿದ್ದ ವೇಳೆ, ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ್ದರಿಂದ ಲಕ್ಷ್ಮಣ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಆದರೆ ಪೊಲೀಸರು ಈ ಆರೋಪವನ್ನು ತಳ್ಳಿಹಾಕಿದ್ದಾರೆ.

ಲಕ್ಷ್ಮಣ ನಾಯ್ಕ್​ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಲಕ್ಷ್ಮಣ್ ಸಾವು ಅಸಹಜ: ಎಸ್ಪಿ ಸ್ಪಷ್ಟೀಕರಣ

ಶಿಕಾರಿಪುರ ತಾಲೂಕು ಸುಣ್ಣದಕೊಪ್ಪದ ಲಕ್ಷ್ಮಣ್ ನಾಯ್ಕ್ ಸಾವು ಅಸಹಜವಾಗಿದ್ದು. ಅವರ ಕುಟುಂಬದವರೇ  ಅಸಹಜ ಸಾವೆಂದು ದೂರು ನೀಡಿದ ಹಿನ್ನೆಲೆಯಲ್ಲಿ ಯುಡಿಆರ್ ಪ್ರಕರಣ  ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷ್ಮಣ್ ನಾಯ್ಕ್ ಅವರು ಪುತ್ರ ರಾಮಚಂದ್ರ ನಾಯ್ಕ್ ಜೊತೆ ಲಗೇಜ್ ಆಟೋದಲ್ಲಿ ತಿರುಗಾಡಿದ್ದಾರೆ. ಶನಿವಾರ ರಾತ್ರಿ ಸುಮಾರು 10-30 ವೇಳೆ ಲಗೇಜ್ ಆಟೋದಲ್ಲಿ ಹೋಗುವಾಗ ಲಕ್ಷ್ಮಣ್ ನಾಯ್ಕ್ ಮಾರ್ಗ ಮಧ್ಯದಲ್ಲಿ ಕುಸಿದು ಬಿದ್ದಿರುವುದಾಗಿ ತಿಳಿದುಬಂದಿದೆ. ಆದರೆ ಅವರ ಕುಟುಂಬದವರೇ ಅಸಹಜ ಸಾವೆಂದು ದೂರು ನೀಡಿರುವ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದರು.

ಮೈ ಮೇಲೆ ಗಾಯಗಳಾಗಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಎಸ್ಪಿ, ಈ ಕುರಿತು ಮರಣೋತ್ತರ ಪರೀಕ್ಷೆಯಲ್ಲಿ ಏನು ವರದಿ ಬರುತ್ತೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ತನಿಖೆಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News