×
Ad

ರಾಜ್ಯದ ಖಾಸಗಿ ಹೊಟೇಲ್ ಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿಸಲು ಮುಂದೆ ಬಂದ ಮಾಲಕರು

Update: 2020-03-29 18:07 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.29: ಕೊರೋನ ಸೋಂಕು ತಡೆಯುವ ನಿಟ್ಟಿನಲ್ಲಿ ಹೊಟೇಲ್ ಮಾಲಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು, ರಾಜ್ಯದ ಹಲವು ಹೊಟೇಲ್‍ಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಬಳಕೆ ಮಾಡಿಕೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಮೂಲಗಳ ಪ್ರಕಾರ ಹುಬ್ಬಳ್ಳಿಯ ಮೆಟ್ರೋಪೊಲಿಸ್, ಚಾಮರಾಜನಗರದ ನಿಜಗುಣ ರೆಸಿಡೆನ್ಸಿ ಮತ್ತು ತುಮಕೂರಿನ ಎಸ್.ಎಸ್. ರೆಸಿಡೆನ್ಸಿ ಹೊಟೇಲ್‍ಗಳ ಮಾಲಕರು ಒಟ್ಟಾರೆ, ತಮ್ಮ 108 ಕೊಠಡಿಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಬಳಸಲು ಸರಕಾರಕ್ಕೆ ಒಪ್ಪಿಗೆ ನೀಡಿ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ, ಹುಬ್ಬಳ್ಳಿಯ ಕೊಪ್ಟಿಕರ್ ರಸ್ತೆಯಲ್ಲಿರುವ ಹೊಟೇಲ್ ಉದ್ಯಮಿ ಅಶ್ರಫ್ ಅಲಿ ಬಶೀರ್ ಅಹ್ಮದ್ ಅವರು ತಮ್ಮ ಮೆಟ್ರೋ ಪೊಲೀಸ್ ಹೊಟೇಲ್ ನ ಒಂದು ಭಾಗದ 46 ಕೊಠಡಿಗಳನ್ನು ಕ್ವಾರಂಟೈನ್‍ನಲ್ಲಿರುವವರಿಗಾಗಿ ನೀಡಲು ಸಿದ್ಧ ಎಂದು ತಿಳಿಸಿದ್ದರು.

ಅದೇ ರೀತಿ, ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಅವರು ತುಮಕೂರಿನ ಬಸ್ ನಿಲ್ದಾಣದ ಬಳಿ 30 ಕೊಠಡಿಯ ಎಸ್‍ಎಸ್ ರೆಸಿಡೆನ್ಸಿ ಹೊಟೇಲ್, ಚಾಮರಾಜನಗರದ ಜನಪ್ರಿಯ ಹೊಟೇಲ್ ಉದ್ಯಮಿ, ಬಿಜೆಪಿ ಮುಖಂಡ ಜಿ.ನಿಜಗುಣ ರಾಜು ಅವರು 32 ಕೊಠಡಿಗಳ ನಿಜಗುಣ ರೆಸಿಡೆನ್ಸಿಯನ್ನು ಕ್ವಾರಂಟೈನ್ ವಾರ್ಡ್ ಆಗಿ ಪರಿವರ್ತಿಸಿಕೊಳ್ಳುವಂತೆ ಮನವಿ ಮಾಡಿದ್ದರು.

ಅಲ್ಲದೇ, ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 3 ಸ್ಟಾರ್ ಮಟ್ಟದ 17 ಹೋಟೆಲ್‍ಗಳನ್ನು ಗುರುತಿಸಿದೆ. ಕೋವಿಡ್ -19 ಶಂಕಿತರನ್ನು ಪರೀಕ್ಷೆಗೊಳಪಡಿಸಿ, ಅದರ ವರದಿ ಬರುವರೆಗೆ ಅಂದರೆ ಗರಿಷ್ಠ ಎರಡು ದಿನಗಳ ಕಾಲ ಈ ಹೊಟೇಲ್ ಗಳಲ್ಲಿ ಪ್ರತ್ಯೇಕವಾಗಿರಿಸಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News