ವೆಂಟಿಲೇಟರ್ ಕೊರತೆ ವಿಚಾರ: ಡಿಸಿಎಂ ಕಾರಜೋಳ, ರೈತ ಮುಖಂಡರ ಮಧ್ಯೆ ಮಾತಿನ ಚಕಮಕಿ
Update: 2020-03-29 18:26 IST
ಕಲಬುರಗಿ, ಮಾ.29: ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ನೇತೃತ್ವದಲ್ಲಿ ರವಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೋನ ಕುರಿತು ನಡೆದ ಸಭೆಯಲ್ಲಿ ರೈತ ಮುಖಂಡ ಮಾರುತಿ ಮಾನ್ಪಡೆ ಅವರು ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆ ಇದೆ ಎಂದು ಧ್ವನಿ ಎತ್ತುತ್ತಿದ್ದಂತೆಯೇ ಕಾರಜೋಳ ಹಾಗೂ ಮಾನ್ಪಡೆ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ.
ಸಭೆ ನಡೆಯುತ್ತಿದ್ದಾಗ ಮಾರುತಿ ಮಾನ್ಪಡೆ ಹಾಗೂ ಕೆಲ ರೈತ ಮುಖಂಡರು ಗೋವಿಂದ್ ಕಾರಜೋಳ ಅವರಿಗೆ ಕೊರೋನ ವೈರಸ್ ಜಿಲ್ಲೆಯಲ್ಲಿ ಹೆಚ್ಚಾಗಿದ್ದರೂ ಇಷ್ಟು ದಿನ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಕಾರಜೋಳ ಅವರು ಉತ್ತರಿಸಲು ಹೋದಾಗ ರೈತ ಮುಖಂಡರು ಇಷ್ಟು ತಡವಾಗಿ ಬಂದಿದ್ದೀರಿ. ಅಲ್ಲದೆ, ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆ ಇದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾತಿನ ಚಕಮಕಿ ಕಂಡ ಪೊಲೀಸರು ಸಭೆಯಲ್ಲಿ ಹಾಜರಿದ್ದ ರೈತ ಮುಖಂಡರನ್ನು ಸಭೆಯಿಂದ ಹೊರ ಕಳುಹಿಸಿದ ಘಟನೆ ನಡೆದಿದೆ.